
ವಿಜಯಪುರ, 08 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಸ್ವಾಭಿಮಾನ ಹಾಗೂ ಆತ್ಮಗೌರವಕ್ಕೆ ಧಕ್ಕೆ ತಂದಿರುವ ಘಟನೆ ನಡೆದಿದೆ ಎಂದು ಆರೋಪಿಸಿ, ವಿಜಯಪುರ ಜಿಲ್ಲೆಯ ಇಂಡಿ–ಚಡಚಣ ತಾಲೂಕಿನ ಹಡಪದ ಸಮಾಜದವರು ಚಡಚಣ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದ ತ್ರಿಪುರಾಂತಕ ಕೆರೆಯ ಸಮೀಪದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಬಸವೇಶ್ವರ ಸಂಸ್ಥೆಯ ಪಂಚಕಮಿಟಿಯವರು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಹಡಪದ ಅಪ್ಪಣ್ಣನವರ ಮೂರ್ತಿಯನ್ನು ತೆರವುಗೊಳಿಸಿ ಅನ್ಯ ಶರಣರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮಹಾದೇವ ಬನಸೋಡೆ ಮಾತನಾಡಿ, ಬಸವಕಲ್ಯಾಣದಲ್ಲಿ ಇರುವ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಸಮೀಪ 12ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇವೆ ಎಂದು ಇತಿಹಾಸ ಸಾಕ್ಷ್ಯಪಡಿಸುತ್ತದೆ. ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿದರು.
ಹಡಪದ ಸಮಾಜದ ಮುಖಂಡ ನಾಗೇಶ ನಾವಿ ಮಾತನಾಡಿ, ಹಡಪದ ಅಪ್ಪಣ್ಣನವರಿಗೆ ಹಾಗೂ ಸಮುದಾಯದ ಭಕ್ತಿಭಾವನೆಗಳಿಗೆ ತೀವ್ರ ಅನ್ಯಾಯವಾಗಿದ್ದು, ಈ ಘಟನೆ ನಮ್ಮ ಇತಿಹಾಸದ ಮೌಲ್ಯವನ್ನು ಕುಗ್ಗಿಸುವಂತಾಗಿದೆ ಎಂದು ಹೇಳಿದರು. ಹಡಪದ ಅಪ್ಪಣ್ಣನವರ ವಂಶಸ್ಥರು ಮತ್ತು ಸಮಾಜದ ಭಕ್ತರಾದ ನಾವು ನಮ್ಮ ಶರಣರ ಇತಿಹಾಸ ಮತ್ತು ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ.
ಈ ಘಟನೆ ನಮ್ಮ ಸಮಾಜದ ಭಾವನೆಗಳಿಗೆ ಗಂಭೀರ ಧಕ್ಕೆ ಉಂಟುಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ಅಕ್ರಮ ಕೃತ್ಯದಲ್ಲಿ ಭಾಗಿಯಾದ ಪಂಚಕಮಿಟಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪನೆ ಮಾಡಿ, ಆ ಸ್ಥಳವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವೇಳೆ ರಮೇಶ್ ನಾವಿ, ಮಾಳಪ್ಪ ನಾವಿ, ರಾಜು ನಾವಿ, ಸಿದ್ದರಾಮ ನಾವಿ, ಸಿದ್ದರಾಮಯ್ಯ ಚಡಚಣ, ನಾಗೇಶ್ ನಾವಿ, ಸಿದ್ದರಾಯ್, ಕಾಶಿನಾಥ ಹಡಪದ, ರಮೇಶ ನರಸಪ್ಪ ರಾವತ, ರಾಜು ಮಾದೇವ ರಾವತ, ಅಶೋಕ ನಾವಿ, ರಾಜು ಮೋ ನಾವಿ, ಮುರುಗೇಶ ಸಿಂಪಿ, ಇಲಾಯಿ ನದಾಫ್, ರಮೇಶ್ ಶಿಂದೆ, ಅಣ್ಣಾ ಪೂಜಾರಿ, ನಾಗೇಶ ಗಾಯಕ್ವಾಡ ಸೇರಿದಂತೆ ಅನೇಕ ಸಮಾಜ ಬಾಂಧವರು ಮತ್ತು ಸಂಘಟನೆ ಮುಖಂಡರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ್ ಸದಸ್ಯರಾದ ಇಲಾಯಿ ನದಾಫ್ ಹಾಗೂ ರಮೇಶ ಸಿಂಧೆ ಸಹ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande