
ಗದಗ, 08 ಏಪ್ರಿಲ್ (ಹಿ.ಸ.) :
ಆ್ಯಂಕರ್ : ತಡರಾತ್ರಿ ಗಾಢ ನಿದ್ರೆಯಲ್ಲಿದ್ದ ಆರು ಜನರ ಮೇಲೆ ವ್ಯಕ್ತಿಯೋರ್ವನು ಮಾರಣಾಂತಿಕ ಹಲ್ಲೆ ನಡೆಸಿದ ಭೀಕರ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡೆದಿದೆ.
ಮಾಹಿತಿ ಪ್ರಕಾರ, ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಮನೆಯ ಮುಂದೆ ಮಲಗಿದ್ದವರ ಮೇಲೆ ಹರ್ಜಪ್ಪ ಲಮಾಣಿ ಎಂಬಾತ ದಿಡೀರ್ ದಾಳಿ ನಡೆಸಿದ್ದಾನೆ. ದೊಣ್ಣೆಯಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ ಆತ, ಮಲಗಿದ್ದವರನ್ನೇ ರಕ್ತದ ಮಡುವಿನಲ್ಲಿ ಒದ್ದಾಡುವಂತೆ ಮಾಡಿದ್ದಾನೆ.
ಹಲ್ಲೆಯ ಸಮಯದಲ್ಲಿ ಕೇಳಿಬಂದ ಕೂಗಾಟ ಮತ್ತು ಚೀರಾಟಕ್ಕೆ ಎಚ್ಚರಗೊಂಡ ತಾಂಡಾ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ತದಲ್ಲಿ ಬಿದ್ದಿದ್ದ ಗಾಯಾಳುಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ಈ ದಾಳಿಯಲ್ಲಿ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಲೆ, ಕಣ್ಣು ಮತ್ತು ಮುಖ ಭಾಗಗಳಿಗೆ ಭಾರಿ ಗಾಯಗಳಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳುಗಳ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಲ್ಲೆ ನಡೆಸಿದ ಹರ್ಜಪ್ಪ ಲಮಾಣಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದ್ದು, ಇದೇ ಕಾರಣದಿಂದ ದಾಳಿ ನಡೆಸಿದ್ದಾನೆಂದು ಶಂಕಿಸಲಾಗಿದೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP