ಏಪ್ರಿಲ್ ೨೩ ರಿಂದ ಕಾಲು ಬಾಯಿ ರೋಗದ ಲಸಿಕಾ ಅಭಿಯಾನ
ಏಪ್ರಿಲ್ ೨೩ ರಿಂದ ಕಾಲು ಬಾಯಿ ರೋಗದ ಲಸಿಕಾ ಅಭಿಯಾನ
ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಕಾಲುಬಾಯಿ ಲಸಿಕಾ ಅಭಿಯಾನದ ಬಿತ್ತಿಪತ್ರವನ್ನು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಬಿಡುಗಡೆ ಮಾಡಿದರು.


ಕೋಲಾರ ೦೭ ಏಪ್ರಿಲ್ (ಹಿ.ಸ) :

ಆ್ಯಂಕರ್ : ಇದೇ ಏಪ್ರಿಲ್ ೨೩ ರಿಂದ ಮೇ ೨೨ ರವರೆಗೆ ಜಿಲ್ಲೆಯಲ್ಲಿ ೯ನೇ ಸುತ್ತಿನ ಕಾಲು ಬಾಯಿ ರೋಗದ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.

ಕಾಲುಬಾಯಿ ರೋಗ ಲಸಿಕೆ ಕುರಿತು ಹಮ್ಮಿಕೊಳ್ಳಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೋಲಾರ ವತಿಯಿಂದ ಹಮ್ಮಿಕೊಳ್ಳಲಾದ ಈ ಅಭಿಯಾನದಲ್ಲಿ ರೈತರು, ಹಾಲು ಉತ್ಪಾದಕರ ಸಂಘಗಳು ಭಾಗವಹಿಸಿ ತಮ್ಮ ಪಶುಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಕೋರಿದರು.

ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ೧೯೬೨ ಪಶು ಸಹಾಯವಾಣಿಗೆ ಕರೆ ಮಾಡಿ ಉಚಿತ ಆಂಬುಲೆನ್ಸ್ ಸೇವೆ ಪಡೆಯಬೇಕು. ನಂತರ ಮಾತನಾಡಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ. ಜಿ.ಎಂ. ರಮೇಶ್, ಕಾಲು ಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಉಂಟಾದರೆ ಆರ್ಥಿಕತೆ ನಷ್ಟ ಮಾಡುತ್ತದೆ. ಅಲ್ಲದೆ ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭ ಕಟ್ಟುವಿಕೆಯಲ್ಲಿ ವಿಳಂಬ ಉಂಟಾಗುತ್ತದೆ ಹಾಗೂ ಹಾಲಿನ ಇಳುವರಿಯಲ್ಲಿ ಇಳಿಮುಖ ಉಂಟಾಗುವ ಸಾಧ್ಯತೆ ಇರುತ್ತದೆ. ರೋಗದಿಂದ ಪೂರ್ಣ ಸುರಕ್ಷತೆಗಾಗಿ ೩ ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವುದು ಅಗತ್ಯವಿದೆ ಎಂದರು.

ಈ ಕಾಲು ಬಾಯಿ ರೋಗದ ಲಸಿಕೆಯನ್ನು ವರ್ಷಕ್ಕೆ ಎರಡು ಬಾರಿ ಹಾಕಲಾಗುತ್ತದೆ. ಒಂದು ತಿಂಗಳು ನಡೆಯುವ ಈ ಅಭಿಯಾನದಲ್ಲಿ ಲಸಿಕೆದಾರರು ಬೆಳಿಗ್ಗೆ ೬ ಗಂಟೆಯಿAದ ೯ ರವರೆಗೆ ಲಸಿಕೆ ಹಾಕಲಿದ್ದಾರೆ. ಸುಮಾರು ೩೭೦ ಲಸಿಕೆದಾರರಿಗೆ ಈ ಕುರಿತು ತರಬೇತಿ ಸಹ ನೀಡಲಾಗಿದೆ. ಈ ಬಾರಿ ಭಾರತ್ ಪಶುಧನ್ ಆ್ಯಪ್ನಲ್ಲಿ ಲಸಿಕೆದಾರರು ಲಸಿಕೆ ಹಾಕಿದ ಮಾಹಿತಿಯನ್ನು ಅಪ್ಲೋಡ್ ಮಾಡಲು ಅವಕಾಶ ಇರುತ್ತದೆ.

ಈ ಅಭಿಯಾನದಲ್ಲಿ ದಿನಕ್ಕೆ ೭೫೦೦ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಒಟ್ಟು ೨,೧೦,೧೪೩ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು. ಕಳೆದ ಬಾರಿ ಈ ಕಾಲು ಬಾಯಿ ಲಸಿಕಾ ಕಾರ್ಯಕ್ರಮದಲ್ಲಿ ಶೇ.೧೦೦ ರಷ್ಟು ಸಾಧನೆ ಮಾಡಲಾಗಿದೆ. ಅಲ್ಲದೆ ೧೯೬೨ ಪಶು ಆ್ಯಂಬುಲೆನ್ಸ್ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ೮೨೭೭೧೦೦೨೦೦ ಅನ್ನು ಸಂಪರ್ಕಿಸಬಹುದೆ0ದು ತಿಳಿಸಿದರು.

ಜಿಲ್ಲೆಯಲ್ಲಿ ೧೯೩೬೯೪ ದನ ಹಾಗೂ ೧೬೪೪೯ ಎಮ್ಮೆಗಳಿಗೆ, ಒಟ್ಟು ೨೧೦೧೪೩ ಜಾನುವಾರುಗಳಿಗೆ ಉಚಿತ ಲಸಿಕೆ ನೀಡುವ ಗುರಿ ಹೊಂದಿದ್ದೇವೆ, ಜಿಲ್ಲೆಯಲ್ಲಿ ಒಟ್ಟು ೬೯ ಲಸಿಕಾ ಮೇಲ್ವಿಚಾರಕರು ಹಾಗೂ ೩೫೮ ಲಸಿಕಾದಾರರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ೯ ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮದ ಕರಪತ್ರ ಮತ್ತು ಭಿತ್ತಿಪತ್ರ ಬಿಡುಗಡೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರವೀಣ್.ಪಿ ಬಾಗೇವಾಡಿ, ಕೋಲಾರ ಜಿಲ್ಲಾ ಹಾಲು ಒಕ್ಕೂಟ ಮಂಡಳಿಯ ವ್ಯವಸ್ಥಾಪಕರಾದ ಡಾ. ಚೇತನ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande