
ವಿಜಯಪುರ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಇದೇ ಏಪ್ರಿಲ್ ೧೦ರಿಂದ ಐದು ದಿನಗಳ ಕಾಲ ಬುದ್ಧ–ಬಸವ–ಅಂಬೇಡ್ಕರ್ ಪುಸ್ತಕ ಮೇಳವನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತಿದ್ದು, ಮೇಳದ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದು ಲಡಾಯಿ ಪ್ರಕಾಶನದ ಮುಖ್ಯಸ್ಥ ಹಾಗೂ ಪ್ರಗತಿಪರ ಚಿಂತಕ ಬಸವರಾಜ್ ಸುಳಿಬಾವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಈ ಮೇಳ ನಡೆಯಲಿದೆ. ಸ್ವರಚಿತ ಪುಸ್ತಕಗಳೊಂದಿಗೆ ಸಾಹಿತಿಗಳ ಜಾಥಾ ಅಪೂರ್ವ ರೀತಿಯಲ್ಲಿ ನಡೆಯಲಿದ್ದು, ಸಾಹಿತಿಗಳೇ ಈ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಏಪ್ರಿಲ್ ೧೦ ರಂದು ಮಧ್ಯಾಹ್ನ ೧೨ ಗಂಟೆಗೆ ಡಿಎಸ್ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಪುಸ್ತಕ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ ಎಮ್ ಜಾನಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಂಬೈನ ಖ್ಯಾತ ಲೇಖಕ ಜಿ ವಿ ಪವಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಅದೇ ದಿನ ಮಧ್ಯಾಹ್ನ ೩ ಗಂಟೆಗೆ “ಸಾಮಾಜಿಕ ಬದ್ಧತೆ – ಪತ್ರಕರ್ತನಾಗಿ ಅನುಭವಗಳು” ಎಂಬ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತರಾದ ಬಿ ಎಮ್ ಹನೀಫ್ ಮತ್ತು ಚಂದ್ರಕಾಂತ್ ವಡ್ಡು ವಿಚಾರ ಮಂಡಿಸಲಿದ್ದಾರೆ. ಹಿರಿಯ ಪತ್ರಕರ್ತ ರಫಿಕ್ ಭಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೫ ಗಂಟೆಗೆ “ನನ್ನ ನೆಚ್ಚಿನ ಪುಸ್ತಕ – ವಿದ್ಯಾರ್ಥಿಗಳ ಮಾತು” ಎಂಬ ಸಂವಾದ, ಸಂಜೆ ೬ಕ್ಕೆ ಕವಿಗೋಷ್ಠಿ ಹಾಗೂ ಸಂಜೆ ೭ಕ್ಕೆ ಬಂಜಾರಾ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೮ಕ್ಕೆ ಗಣೇಶ ಕಾಂಬಳೆ ಮತ್ತು ರಮೇಶ್ ನಾಯಕ ಅವರಿಂದ ಪವಾಡ ಬಯಲು ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ ೧೧ರಂದು ಶಿಕ್ಷಕ ದಂಪತಿಗಳ ಮೆರವಣಿಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ಖ್ಯಾತ ಚಿಂತಕಿ ಡಾಮೀನಾಕ್ಷಿ ಬಾಲಿ ದಿಕ್ಸೂಚಿ ಭಾಷಣ ಮಾಡಲಿದ್ದು, ಸಂಜೆ ೪ಕ್ಕೆ ಲೇಖಕರೊಂದಿಗೆ ಸಂವಾದ ಹಾಗೂ ಸಂಜೆ ೬ಕ್ಕೆ ಕವಿಗೋಷ್ಠಿ ನಡೆಯಲಿದೆ.
ಏಪ್ರಿಲ್ ೧೨ರಂದು ಬಸವಾದಿ ಶರಣರ ವಚನಗಳ ಪವಿತ್ರ ಕಟ್ಟುಗಳ ಮೆರವಣಿಗೆ ನಡೆಯಲಿದ್ದು, ನಂತರ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕಿ ಡಾ ಹೆಚ್ ಅನುಪಮಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ “ಮುದ್ರಣ ಗುಮ್ಮಟ” ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ ಹಾಗೂ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
ಏಪ್ರಿಲ್ ೧೩ರಂದು ಕಾಕಾ ಕಾರಖಾನೀಸರ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಡಾ ಕೃಷ್ಣಾ ಕೋಲ್ಹಾರ್ ಕುಲಕರ್ಣಿ ಉಪನ್ಯಾಸ ನೀಡಲಿದ್ದಾರೆ. ಏಪ್ರಿಲ್ ೧೪ರಂದು ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವದ ಅಂಗವಾಗಿ ಖ್ಯಾತ ಚಿಂತಕ ಶಿವಸುಂದರ್ ಪ್ರಧಾನ ಭಾಷಣ ಮಾಡಲಿದ್ದಾರೆ.
ಪುಸ್ತಕ ಜಗತ್ತು ಮಾನವೀಯತೆಯ ನೆಲೆಗಟ್ಟಿನಲ್ಲಿ ಮನುಕುಲವನ್ನು ಮರಳಿ ತರಲು ಕಾರ್ಯೋನ್ಮುಖವಾಗುವ ವೇದಿಕೆಯಾಗಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ಇದು ಸಾಹಿತ್ಯಿಕದ ಜೊತೆಗೆ ಸಾಂಸ್ಕೃತಿಕ ಮೇಳವೂ ಆಗಿದೆ ಎಂದು ಬಸವರಾಜ ಸೂಳಿಭಾವಿ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಜ್ಞಾನ ಕೊರತೆಯನ್ನು ನೀಗಿಸುವಲ್ಲಿ ಆಧುನಿಕ ಭಗೀರಥರೆಂದು ಗುರುತಿಸಲ್ಪಟ್ಟ ಸಚಿವ ಎಮ್ ಬಿ ಪಾಟೀಲ್ ಪ್ರಮುಖ ಪಾತ್ರವಹಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಪ್ರತಿ ಗ್ರಾಮದಲ್ಲೂ ಗ್ರಂಥಾಲಯ ಸ್ಥಾಪನೆಯಾಗಬೇಕು, ಗ್ರಂಥಾಲಯ ಇಲ್ಲದ ಗ್ರಾಮ ಇರಬಾರದು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಾಜಶೇಖರ್ ಯಡಳ್ಳಿ, ಅನಿಲ್ಹೊಸಂಇ, ಡಾ ದೊಡ್ಡಣ್ಣ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande