
ಕೋಲಾರ ೭ ಏಪ್ರಿಲ್ (ಹಿ.ಸ) :
ಆ್ಯಂಕರ್ : ಸರ್ಕಾರಿ ಕೆಲಸ ದೇವರ ಕೆಲಸ ಎಂದು ದಿವಂಗತ ಕೆಂಗಲ್ ಹನುಮಂತ್ಯ ನಂಬಿದ್ದರು. ಇದರಿಂದಲೇ ಅವರು ವಿಧಾನ ಸೌಧ ಮೇಲೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆತ್ತನೆ ಮಾಡಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ದೇವರ ಹೆಸರು ಹೇಳಿದರೆ ಯಾರೂ ಕೆಲಸ ಮಾಡುವುದಿಲ್ಲ. ಕಡತಗಳು ಮುಂದೆ ಹೋಗುವುದಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈ ಬಿಸಿ ಮಾಡಬೇಕು. ಕೈ ಬಿಸಿ ಮಾಡುವ ಒಂದು ಪದ್ದತಿ ಸರ್ಕಾರಿ ಇಲಾಖೆಗಳಲ್ಲಿ ಬೇರು ಬಿಟ್ಟಿದೆ. ವಿಳಂಬ ದೋರಣೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಲಂಚ ಪಡೆಯುವುದು ಅಪರಾಧ.
ಕರ್ನಾಟಕ ಉಪ ಲೋಕಾಯುಕ್ತರು ಆಗಾಗ ತಾಲ್ಲುಕು ಕಛೇರಿಗಳಿಗೆ ಭೇಟಿ ನೀತಿ ಅನುಸರಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜನ್ಮ ಜಾಲಾಡಿದ್ದಾರೆ. ಆದರೆ ಏನು ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ. ಸರ್ಕಾರಿ ಅಧಿಕಾರಿ ಮತ್ತು ನೌಕರರನ್ನು ಸರಿದಾರಿಗೆ ತರುವುದು ದೊಡ್ಡ ಸಾಹಸ ಆಗಿದೆ. ನಮ್ಮ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಮಂಗಳವಾರ ದಿಡೀರನೆ ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವ್ಯವಸ್ಥೆಗೆ ತಾಲ್ಲೂಕು ಕಛೇರಿಯ ವಾಸ್ತು ಸರಿಇಲ್ಲವಂತೆ. ತಹಶೀಲ್ದಾರ್ ಚೇಂಬರ್ ಬಳಿ ಇರುವ ಶೌಚಾಲಯವನ್ನು ಬದಲಾಯಿಸಿ ಆಗ ವ್ಯವಸ್ಥೆ ಸರಿ ಹೋಗುವುದು ಎಂದು ಹೇಳಿದ್ದಾರೆ.
ಈ ಯೋಚನೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರಿಗೆ ಹೊಳೆದಿಲ್ಲ. ಲೋಕೋಪಯೋಗಿ ಇಲಾಖೆಗೆ ಹೇಳಿ ಮೊದಲ ಹಂತದಲ್ಲಿ ವಿಧಾನಸೌಧ ಹಾಗೂ ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗಳ ವಾಸ್ತು ಸರಿಪಡಿಸಿದರೆ ಆಡಳಿತ ಸರಿಹೋಗುತ್ತದೆ. ಶಾಸಕರ ಈ ಸಲಹೆಯನ್ನು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಹಾಗೂ ಮುಖ್ಯಮಂತ್ರಿಗಳು ಪಡಯಲೇಬೇಕು. ಮುಖ್ಯ ಮಂತ್ರಿಗಳ ಕಛೇರಿಯ ವಾಸ್ತು ದೋಷ ಇರಬಹುದು. ವಾಸ್ತು ದೋಷ ಸರಿಪಡಿಸಿದರೆ ಮುಂದಿನ ಅವಧಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಉಪ ಚುನಾವಣೆ ಪ್ರಚಾರ ಮುಗಿದಿದೆ. ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಕೊತ್ತೂರು ಮಂಜುನಾಥ್ ರವರನ್ನು ಕರೆಯಿಸಿ ಅಧಿಕಾರ ಹಂಚಿಕೆ ಬಗ್ಗೆ ಇರುವ ವಾಸ್ತು ದೋಷದ ಬಗ್ಗೆ ಚರ್ಚೆ ಮಾಡಬೇಕು.
ಕಡತ ಪರಿಶೀಲಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಡತ ಇಟ್ಟುಕೊಂಡು ಏಕೆ ಜನಸಾಮಾನ್ಯರನ್ನು, ರೈತರನ್ನು ಸತಾಯಿಸುತ್ತೀರಿ ಎಂದು ಪ್ರಶ್ನಿಸಿದರು. ಕಾನೂನು ಪ್ರಕಾರವೇ ಕಡತ ವಿಲೇವಾರಿ ಮಾಡಿ. ಆದರೆ, ವರ್ಷಗಟ್ಟಲೇ ತಮ್ಮ ಬಳಿ ಕಡತಗಳನ್ನು ಇಟ್ಟುಕೊಳ್ಳುವ ಉದ್ದೇಶವಾದರೂ ಏನು? ಎಷ್ಟು ಕಡತಗಳು ತಮ್ಮ ಬಳಿ ವಿಲೇವಾರಿ ಆಗಲು ಬಾಕಿ ಇವೆ ಎಂದು ಕೇಳಿದ ಅವರು, ಮುಂದಿನ ಬುಧವಾರ ಮತ್ತೆ ಇಲ್ಲಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿರಬೇಕು ಇದು ಮನವಿ ಅಲ್ಲ ಗಡುವು ಎಂದರು.
ತಮಗೆ ಎಷ್ಟು ಹಣ ಬೇಕು ಹೇಳಿ, ನಾನೇ ಕೊಡುತ್ತೇನೆ? ಆದರೆ, ಬಡಜನರನ್ನು ಪದೇಪದೇ ಕಚೇರಿಗೆ ಅಲೆಸದೆ ಕೆಲಸ ಮಾಡಿಕೊಡಿ. ನನ್ನ ಸ್ವಂತ ಕೆಲಸಕ್ಕೆಂದು ನಾನು ಯಾವತ್ತೂ ತಹಶೀಲ್ದಾರ್ ಕಚೇರಿಗೆ ಬಂದಿಲ್ಲ ಪೋನು ಸಹ ಮಾಡಿಲ್ಲ ಆದರೆ ಸಾರ್ವಜನಿಕರ ಕೆಲಸ ವಿಳಂಬ ಮಾಡುತ್ತಿರುವ ಬಗ್ಗೆ ನನಗೆ ವಿಪರೀತ ದೂರುಗಳು ಬರುತ್ತಿವೆ. ರೈತರನ್ನು ಏಕೆ ಪದೇಪದೇ ಕಚೇರಿಗೆ ಅಲೆಸುತ್ತೀರಿ? ತಮ್ಮ ಟೇಬಲ್ಗೆ ಬರುವ ಕಡತ ಅಲ್ಲಿಂದ ಮುಂದೆ ಸಾಕಲು ಏಕೆ ವಿಳಂಬ ಮಾಡುತ್ತೀರಿ ಎಂದು ರೈತರು ಸಾಯಬೇಕು ಅವತ್ತು ಮಾಡಿಕೊಡತ್ತೀರ ಹೇಳಿ ಎಂದು ಅಧಿಕಾರಿಗಳ ವಿರುದ್ದ ಗರಂ ಆದರು.
ದ್ವಿತೀಯ ದರ್ಜೆ ಸಹಾಯಕಿಯರಾದ ಸುಜಾತಾ ಮತ್ತು ಚಾಮುಂಡೇಶ್ವರಿದೇವಿ ಬಳಿ ತೆರಳಿ ಹಳೆ ದಾಖಲೆಗಳನ್ನು ಜಾಲಾಡಿದರು. ಟೇಬಲ್ ಮೇಲೆ ರಾಶಿ ಕಡತ ಇಟ್ಟುಕೊಂಡು ಏನು ಮಾಡುತ್ತೀರಿ ಎಂದು ಕೇಳಿದರು. ಕೆಲವೊಂದು ದಾಖಲೆಗಳನ್ನು ಹುಡುಕಿ ಕೊಡಲು ಸಿಬ್ಬಂದಿ ಪರದಾಡಿದರು. ಸರ್ವೆ ವಿಭಾಗ, ಟಪಾಲು ವಿಭಾಗ, ಡಿಜಿಟಲ್ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ ಶಾಸಕರು ನಂತರ ಸಭಾಂಗಣದಲ್ಲಿ ತಹಶೀಲ್ದಾರ್ ಡಾ.ನಯನಾ ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದರು.
ಪ್ರಮುಖವಾಗಿ ಸುಜಾತಾ ಹಾಗೂ ಸುಲೋಚನಾ ಅವರ ಮೇಲೆ ಹೆಚ್ಚು ದೂರುಗಳು ಬರುತ್ತಿವೆ. ಅವರನ್ನು ಮುಳಬಾಗಿಲಿಗೂ, ಶ್ರೀನಿವಾಸಪುರಕ್ಕೋ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಹೇಳುತ್ತೇನೆ. ಸರ್ವೆ ವಿಭಾಗದ ಮೇಲೆ ಇರುವಷ್ಟು ದೂರು ಬೇರೆ ಎಲ್ಲೂ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಇಲ್ಲಿಂದ ಹೊರಟುಬಿಡಿ. ಕೆಲಸ ಮಾಡದವರ ಹೆಸರು ಕೊಡಿ ಎಂದರು.
ಆಗ ತಹಶೀಲ್ದಾರ್ ನಯನಾ ಮಾತನಾಡಿ, ಸುಜಾತಾ ಅವರ ಕೆಲಸ ನಿಧಾನ. ಸುಲೋಚನಾ ಅವರ ಸಂಬ0ಧ ಯಾವುದೇ ಭ್ರಷ್ಟಾಚಾರದ ದೂರುಗಳು ಇಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಹಾಗಾದರೆ ಯಾಕೆ ದೂರುಗಳು ಜಾಸ್ತಿ ಬರತ್ತೇವೆ ಹೇಳಿ ಎಂದು ಮರು ಪ್ರಶ್ನೆ ಹಾಕಿದರು.
ಸರ್ವೆ ಸಿಬ್ಬಂದಿ ಕೊರತೆ ಇದ್ದು, ಕನಿಷ್ಠ ಇಬ್ಬರು ಸಿಬ್ಬಂದಿ ಬೇಕು ಎಂದು ಸರ್ವೆ ವಿಭಾಗದವರ ಮನವಿ ಮಾಡಿದರು. ಡಾ.ನಯನಾ ವಿರುದ್ಧವೂ ದೂರುಗಳು ಬರುತ್ತಿರುವುದನ್ನು ಕೊತ್ತೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ ತಹಶೀಲ್ದಾರ್ ಬರುವುದೇ ಇಲ್ಲ, ದೂರದ ಹಳ್ಳಿಗರ ಜನರಿಗೆ ತೊಂದರೆ ಆಗುತ್ತಿದೆ. ಸಂಜೆ ಆರು ಗಂಟೆ ಮೇಲೆ ಬರುತ್ತಾರೆ ಎಂಬ ದೂರುಗಳು ಇವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಆಗ ಡಾ.ನಯನಾ, ನಿತ್ಯ ಒಂದಿಲ್ಲೊ0ದು ಸಭೆಗಳು ಇರುತ್ತವೆ. ಮುಖ್ಯಕಚೇರಿಯಲ್ಲಿ ಸಭೆ ಇರುತ್ತವೆ. ನ್ಯಾಯಾಲಯ ಪ್ರಕರಣಗಳಿರುತ್ತವೆ. ಅದಕ್ಕೆ ಹೋಗಬೇಕಾಗುತ್ತದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.
ತಹಶೀಲ್ದಾರ್ ಕಚೇರಿಯಲ್ಲಿ ವಾಸ್ತು ಸಮಸ್ಯೆ ಇದೆ. ಶೌಚಾಲಯ ಬದಲಾಯಿಸಿ. ಸಮಸ್ಯೆ ಸರಿ ಹೋಗಬಹುದು ಎಂದು ಶಾಸಕರು ಸಲಹೆ ನೀಡಿದರು.
ಸಭೆಯಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಕುಮಾರ್, ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್