
ಕೋಲಾರ, ೦೭ ಏಪ್ರಿಲ್ (ಹಿ.ಸ) :
ಆ್ಯಂಕರ್ : ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಮಯ ಪಾಲನೆಯೊಂದಿಗೆ ಕ್ರಮಬದ್ದ,ವಿದ್ಯಾರ್ಥಿಸ್ನೇಹಿ ಮೌಲ್ಯಮಾಪನ ನಡೆಸಿ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಜಂಟಿ ಹಾಗೂ ಉಪ ಮೌಲ್ಯಮಾಪಕರು,ಕೇಂದ್ರ ವ್ಯವಸ್ಥಾಪಕರಿಗೆ ಕರೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಏ.೮ ರಿಂದ ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಮಂಗಳವಾರ ನಗರದ ವಿವಿಧ ಮೌಲ್ಯಮಾಪನ ಕೇಂದ್ರಗಳಲ್ಲಿ ಜಂಟಿ ಹಾಗೂ ಉಪ ಮೌಲ್ಯಮಾಪಕರು, ಜಿಲ್ಲಾಮಟ್ಟದ ಕಂಪ್ಯೂಟರ್ ಪ್ರೋಗ್ರಾಮರ್ಗಳು ಮೌಲ್ಯಮಾಪನ ಕಾರ್ಯದಲ್ಲಿ ಅನುಸರಿಸಬೇಕಾದ ನಿಯಮಗಳ ಪಾಲನೆ, ಅಂಕಗಳ ನೀಡಿಕೆ ಕುರಿತು ಅರಿವು ಮೂಡಿಸಿ ಮಾತನಾಡಿದರು. ಈ ಬಾರಿಯೂ ನೀವೇ ಗಣಕಯಂತ್ರದಲ್ಲಿ ಆನ್ಲೈನ್ನಲ್ಲಿ ದಾಖಲಿಸಬೇಕಾಗಿದೆ ಎಂದು ತಿಳಿಸಿ, ಪ್ರತಿ ವಿದ್ಯಾರ್ಥಿಯ ಭವಿಷ್ಯ ಅಡಗಿರುವ ಈ ಮೌಲ್ಯಮಾಪನ ಕಾರ್ಯದಲ್ಲಿ ಉಪ ಮುಖ್ಯ ಮೌಲ್ಯಮಾಪಕರು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು, ಸಹ ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ ಉತ್ತರ ಪತ್ರಿಕೆಗಳನ್ನು ಅಡ್ಡ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿ, ತಪ್ಪುಗಳು ಮಾಡಿದರೆ ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಶಿಕ್ಷಣ ಕಾಯಿದೆ ೨೮ ಹಾಗೂ ೧೨೬ ರ ಅನ್ವಯ ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳು-೨೦೧೨ರಂತೆ ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯಗೊಳಿಸಲಾಗಿದೆ ಸಕಾರಣವಿಲ್ಲದೇ ಮೌಲ್ಯಮಾಪನ ಕಾರ್ಯಕ್ಕೆ ಗೈರಾಗುವ ಶಿಕ್ಷಕರ ವಿರುದ್ದ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು. ನಗರದ ಆರು ಮೌಲ್ಯಮಾಪನ ಕೇಂದ್ರಗಳಲ್ಲಿ ೬ ಜಂಟಿ ಮುಖ್ಯ ಮೌಲ್ಯಮಾಪಕರು, ೬ ಮಂದಿ ವ್ಯವಸ್ಥಾಪಕರು ಸೇರಿದಂತೆ ೨೫೧ ಉಪ ಮುಖ್ಯಮೌಲ್ಯಮಾಪಕರು, ೧೫೭೦ ಮಂದಿ ಸಹ ಮೌಲ್ಯಮಾಪಕರು ಕಾರ್ಯನಿರ್ವಹಿಸುವರು. ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ ಮಾತನಾಡಿ, ಡಿಕೋಡಿಂಗ್ ಮತ್ತಿತರ ಸಿದ್ದತೆಗಳನ್ನು ಜಂಟಿ ಹಾಗೂ ಉಪ ಮುಖ್ಯ ಮೌಲ್ಯಮಾಪಕರು ಮಂಗಳವಾರ ಮಾಡಲಿದ್ದು, ಏ.೮ ರಿಂದ ಎಲ್ಲಾ ಸಹ ಮೌಲ್ಯಮಾಪಕರು ಹಾಜರಾಗುವ ಮೂಲಕ ಪೂರ್ಣಪ್ರಮಾಣದಲ್ಲಿ ಅಂದೇ ಮೌಲ್ಯಮಾಪನಕ್ಕೆ ಚಾಲನೆ ಸಿಗಲಿದೆ ಎಂದರು.
ಮೌಲ್ಯಮಾಪನ ಕೇಂದ್ರದಲ್ಲಿ ಮೊಬೈಲ್ ಬಳಸುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಎಂದು ತಿಳಿಸಿದ ಅವರು, ಅಂತಹ ದೂರುಗಳು ಕಂಡು ಬಂದಲ್ಲಿ ಶಿಕ್ಷಕರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಜಂಟಿ ಹಾಗೂ ಕೇಂದ್ರ ವ್ಯವಸ್ಥಾಪಕರು ಪ್ರತಿ ದಿನ ಬೆಳಗ್ಗೆ ೯-೦೦ಕ್ಕೆ ಕೇಂದ್ರದಲ್ಲಿ ಹಾಜರಿರಬೇಕು, ಹಾಗೆಯೇ ಉಪ ಮೌಲ್ಯಮಾಪಕರು ಬೆಳಗ್ಗೆ ೯-೩೦ ಗಂಟೆಗೆ ಸಹಮೌಲ್ಯಮಾಪಕರು ೧೦ ಗಂಟೆಗೆ ಹಾಜರಾಗಬೇಕು ಎಂದು ತಿಳಿಸಿದರು. ಸಮಯಪಾಲನೆಯ ಜತೆಗೆ ಮೌಲ್ಯಮಾಪನ ನಡೆಸುವಾಗ ಮಧ್ಯದಲ್ಲಿ ಹೊರ ಹೋಗುವುದು, ಬೇರೆ ಕೆಲಸದ ಮೇಲೆ ತೆರಳುವುದು ಕಂಡು ಬಂದಲ್ಲಿ ಕ್ರಮದ ಎಚ್ಚರಿಕೆ ನೀಡಿ, ಮೌಲ್ಯಮಾಪಕರಿಗೆ ಮತ್ತು ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ ಎಂದರು.
ಮೌಲ್ಯಮಾಪನ ಕೇಂದ್ರಕ್ಕೆ ಹೊರಗಿನ ವ್ಯಕ್ತಿಗಳು, ರಾಜಕೀಯಪಕ್ಷ,ಸಂಘಟನೆಗಳ ಮುಖಂಡರು ಪ್ರವೇಶ ನಿಷಿದ್ದವಾಗಿದೆ, ಕೇಂದ್ರದ ಸಿಬ್ಬಂದಿ ಯಾವುದೇ ಪ್ರಾಯೋಜಕರಿಂದ ಊಟ,ತಿಂಡಿ,ಟೀ,ಕಾಫಿ ಪಡೆಯುವಂತಿಲ್ಲ ಎಂದು ಸ್ವಷ್ಟಪಡಿಸಿ, ಕೇಂದ್ರಗಳ ಸುತ್ತಮುತ್ತ ಮೌಲ್ಯಮಾಪನ ಮುಗಿಯುವವರೆಗೂ ೨೦೦ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೌಲ್ಯಮಾಪನ ಕೇಂದ್ರಗಳಲ್ಲಿ ಶೌಚಾಲಯಗಳ ಸ್ವಚ್ಚತೆಗೆ ಆಯಾ ಕೇಂದ್ರಗಳಿಗೆ ಸೂಚಿಸಲಾಗಿದೆ, ಸ್ವಚ್ಚತೆ ಕೊರತೆ ಕಂಡು ಬಂದಲ್ಲಿ ಕೇಂದ್ರದ ವ್ಯವಸ್ಥಾಪಕರಿಗೆ ತಿಳಿಸಬೇಕು. ಮೌಲ್ಯಮಾಪಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಯಾವುದೇ ಸಮಸ್ಯೆ ಎದುರಾಗದಂತೆ ಕಾರ್ಯ ನಿರ್ವಹಿಸಿ. ಉಪಮುಖ್ಯ ಮೌಲ್ಯಮಾಪಕರು ಸಹ ಮೌಲ್ಯಮಾಪಕರ ಕಾರ್ಯದ ಮೇಲೆ ನಿಗಾ ವಹಿಸಬೇಕು ಎಂದರು.
ಮೌಲ್ಯಮಾಪನ, ಅಂಕಗಳ ನಮೂದು, ಕೂಡುವಿಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಿ, ಸಹ ಮೌಲ್ಯಮಾಪಕರ ಕಾರ್ಯವನ್ನು ಪರಿಶೀಲಿಸುತ್ತಿರಿ, ದಂಡರಹಿತವಾಗಿ ಮೌಲ್ಯಮಾಪನ ಮಾಡಿ ಎಂದು ಸೂಚಿಸಿದರು.
ಎಸ್ಸೆಸ್ಸೆಲ್ಸಿ ಮೌಲ್ಯಮಾಪಕ ಕೇಂದ್ರಗಳಿಗೆ ವಿಷಯವಾರು ವ್ಯವಸ್ಥಾಪಕರನ್ನು ನೇಮಿಸಲಾಗಿದ್ದು, ಕನ್ನಡ ಕೇಂದ್ರಕ್ಕೆ ಶಿಕ್ಷಣಾಧಿಕಾರಿ ಶಂಕರೇಗೌಡ, ಇಂಗ್ಲೀಷ್ ಕೇಂದ್ರಕ್ಕೆ ಜಿಲ್ಲಾ ಸಹಾಯಕ ಸಮನ್ವಯಾಧಿಕಾರಿ ಕೆ.ಎನ್.ಗಾಯತ್ರಿ, ಹಿಂದಿ ಮೌಲ್ಯಮಾಪನ ಕೇಂದ್ರಕ್ಕೆ ಜಿಲ್ಲಾ ಯೋಜನಾ ಉಪಸನಮನ್ವಯಾಧಿಕಾರಿ ಸಯದ್ ನಾಹಿದಾ ಫಾತಿಮ, ಗಣಿತ ಮೌಲ್ಯಮಾಪನ ಕೇಂದ್ರಕ್ಕೆ ಯೋಜನಾ ಉಪಸಮನ್ವಯಾಧಿಕಾರಿ ರಾಜೇಶ್ವರಿ, ವಿಜ್ಞಾನ ಮೌಲ್ಯಮಾಪನ ಕೇಂದ್ರಕ್ಕೆ ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ, ಸಮಾಜವಿಜ್ಞಾನ ಕೇಂದ್ರಕ್ಕೆ ವಿಷಯ ಪರಿವೀಕ್ಷಕ ಸೈಯದ್ ಸಮೀಉಲ್ಲಾ ವ್ಯವಸ್ಥಾಪಕರಾಗಿರುತ್ತಾರೆ ಎಂದು ತಿಳಿಸಿದರು.
ಜಂಟಿ ಮುಖ್ಯ ಪರೀಕ್ಷಕರಾಗಿ ಕನ್ನಡಕ್ಕೆ ಕೆ.ಗಣೇಶಯ್ಯ, ಇಂಗ್ಲೀಷ್ಗೆ ಫರೀದಾಖಾನಂ, ಹಿಂದಿಗೆ ರೆಹನಾಬೇಗಂ, ಗಣಿತಕ್ಕೆ ಸವಿತಾಶರ್ಲಿನ್ ಚಾರ್ಲ್ಸ್, ವಿಜ್ಞಾನಕ್ಕೆ ಎಂ.ಎಸ್.ಶ್ರೀನಿವಾಸಗೌಡ ಸಮಾಜವಿಜ್ಞಾನಕ್ಕೆ ಕೆ.ಬಿ.ನಾರಾಯಣಸ್ವಾಮಿ, ನೇಮಿಸಲಾಗಿದ್ದು, ಗಣಕ ಯಂತ್ರ ವಿಭಾಗದ ಉಸ್ತುವಾರಿಯಾಗಿ ಡಿಡಿಪಿಐ ಕಚೇರಿಯ ವೇಣು ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್