
ಬೆಂಗಳೂರು, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದ ಜಿಲ್ಲೆಗಳಲ್ಲಿನ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಹಲವಾರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಅಸಿಸ್ಟೆಂಟ್ ಅಕೌಂಟೆಂಟ್ ಸುಶೀಲಮ್ಮ ನಿವಾಸಗಳ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಮೆದೇಹಳ್ಳಿ ರಸ್ತೆ ನಿವಾಸ ಹಾಗೂ ಹಿರಿಯೂರಿನ ಯಾರದಕಟ್ಟೆ ತೋಟದ ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಈ ಕಾರ್ಯಾಚರಣೆ ಎಸ್ಪಿ ವಾಸುದೇವ್ ರಾಮ್ ಮತ್ತು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ನಡೆದಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ತನಿಖೆ ಮುಂದುವರೆದಿದೆ.
ಇನ್ನೊಂದೆಡೆ ಬಳ್ಳಾರಿ ನಗರದಲ್ಲೂ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಮನೆ ಮತ್ತು ಕಚೇರಿ ಸೇರಿ ನಾಲ್ಕು ಕಡೆ ದಾಳಿ ನಡೆದಿದೆ. ಸಿದ್ಧಾರ್ಥ್ ನಗರದಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಬ್ಯಾಂಕ್ ದಾಖಲೆಗಳು ಸೇರಿದಂತೆ ಆಸ್ತಿ ವಿವರಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆದಿದೆ. ಶಿಕಾರಿಪುರ ಸಮೀಪ ತರಲಘಟ್ಟ, ಸಾಗರ ತಾಲೂಕಿನ ಆನಂದಪುರದ ಆಚಾಪುರ ಪ್ರದೇಶ ಸೇರಿದಂತೆ ಹಲವೆಡೆಗಳಲ್ಲಿ ತಂಡಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿವೆ.
ಬೆಳಗಾವಿ ಜಿಲ್ಲೆಯ ನಗರಾಭಿವೃದ್ಧಿ ಕೋಶದ ಎಇಇ ಅಜಯ್ ಸಿಂಗ್ ರಜಪೂತ್ ಮನೆಗಳ ಮೇಲೂ ದಾಳಿ ನಡೆದಿದೆ. ಆಂಜನೇಯ ನಗರ, ಅಥಣಿ ಮತ್ತು ಹುಕ್ಕೇರಿ ಸೇರಿ ಮೂರು ಕಡೆಗಳಲ್ಲಿ ದಾಳಿ ನಡೆದಿದೆ.
ಇದೇ ವೇಳೆ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಎಇಇ ರೇವಣ್ಣ ವಿರುದ್ಧವೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆದಿದೆ. ಮೈಸೂರು ಕಚೇರಿ ಹಾಗೂ ಮಂಡ್ಯದ ನಿವಾಸಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa