
ಕೋಲಾರ, ೦೭ ಏಪ್ರಿಲ್ (ಹಿ.ಸ) :
ಆ್ಯಂಕರ್ : ರಾಜ್ಯಸರ್ಕಾರವು ಸರ್ಕಾರಿ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸದೆ ವಿಳಂಭ ದೋರಣೆಯನ್ನು ತೋರುತ್ತಿರುವುದನ್ನು ಖಂಡಿಸಿ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳಾದ ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿದರು.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಪ್ಪ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಸುಮಾರು ೨.೮೪ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವುದಾಗಿ ಸರ್ಕಾರ ಹುಸಿ ಭರವಸೆಗಳನ್ನು ನೀಡುತ್ತ ಬರುತ್ತಿದೆ. ಪ್ರಸ್ತುತ ವರ್ಷದಲ್ಲಿ ೫೬,೪೩೨ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ ಇದೂ ಸಹ ಕೇವಲ ಭರವಸೆಗೆ ಸೀಮಿತವಾಗಿಯೇ ಉಳಿದಿದೆ ಎಂದು ಆಪಾದಿಸಿದರು.
ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಉದ್ದೇಶದಿಂದ ಸಾಕಷ್ಟು ಅಭ್ಯರ್ಥಿಗಳು ತಮ್ಮ ಮನೆ ಬಿಟ್ಟು ಕುಳಿತು ಸಿದ್ದತೆ ನಡೆಸುತ್ತಿದ್ದಾರೆ. ಆದರೆ ವರ್ಷಗಳು ಕಳೆದರೂ ಸಹ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ಮುಂದಿನ ಜೀವನದ ದಾರಿಯೇ ತಿಳಿಯದಂತಹ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಈ ಅಸಡ್ಡೆಯ ಧೋರಣೆಯು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ಉಗ್ರ ಹೋರಾಟವನ್ನು ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ವಿವಿಧ ಇಲಾಖೆಯಲ್ಲಿ ಖಾಲಿರುವ ಹುದ್ದೆಗಳಿಗೆ ಈ ಕೂಡಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಬೇಕು. ಕೆಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲವಾಗಿರುವುದಿಂದ ವಯೋಮಿತಿಯನ್ನು ಹೆಚ್ಚಿಸಬೇಕು. ಕೆ.ಪಿ.ಎಸ್.ಸಿ ನಡೆಸಿದ ಕೆ.ಎ.ಎಸ್, ಸಿ.ಟಿ.ಐ, ಪಿಡಿಓ ಇತ್ಯಾದಿ ಪರೀಕ್ಷೆಗಳಲ್ಲಿ ಅಕ್ರಮಗಳು ಕಂಡುಬAದಿದ್ದು ಇವುಗಳ ಬಗ್ಗೆ ತನಿಖೆ ಮಾಡಲು ಸಿ.ಬಿ.ಐಗೆ ಒಪ್ಪಿಸಬೇಕು. ಜಿಲ್ಲಾ ಗ್ರಂಥಾಲಯದಲ್ಲಿ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಎನ್.ಕೆ.ನಾಗೇಶ್ ಮಾತನಾಡಿ, ಕೋಲಾರ ಜಿಲ್ಲೆಯ ಸ್ಪರ್ಧಾರ್ಥಿಗಳಿಗೆ ಅಧ್ಯಯನ ಮಾಡಲು ಜಿಲ್ಲಾ ಗ್ರಂಥಾಲಯದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಇದರಿಂದ ಅಭ್ಯರ್ಥಿಗಳು ಅಧ್ಯಯನ ಮಾಡಲು ಸಮಸ್ಯೆಯಾಗುತ್ತಿದೆ. ಗ್ರಂಥಾಲಯದ ಹೊರಗಿನ ಮರಗಳ ಕೆಳಗೆ ಕುಳಿತು ಅಧ್ಯಯನ ಮಾಡುವ ಸ್ಥಿತಿ ಬಂದೊದಗಿದೆ. ಹಾಗಾಗಿ ಸರ್ಕಾರವು ಈ ಕೂಡಲೇ ಜಿಲ್ಲೆಗೆ ೫೦೦ ಆಸನಗಳ ಸಾಮರ್ಥ್ಯದ ಹೊಸ ಗ್ರಂಥಾಲಯವನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಇಲಾಖೆಯಲ್ಲಿ ಸೂಕ್ತ ನೇಮಕಾತಿಗಳನ್ನು ಮಾಡಿಕೊಳ್ಳದೆ ಸರ್ಕಾರ ಆಡಳಿತ ಯಂತ್ರ ಕುಸಿಯುತ್ತಿದೆ. ಸರ್ಕಾರ ಕಾಲಕಾಲಕ್ಕೆ ನೇಮಕಾತಿಗಳನ್ನು ನಡೆಸದೆ ಯುವ ಸಮುದಾಯಕ್ಕೆ ಅನ್ಯಾಯವೆಸಗುತ್ತಿದೆ. ಪ್ರತಿವರ್ಷ ಸಾವಿರಾರು ಮಂದಿ ನಿವೃತ್ತಿಯನ್ನು ಹೊಂದುತ್ತಾರೆ. ಇಂತಹ ಸಮಯದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವವರೇ ಇಲ್ಲದಂತಾದರೆ ಸಾರ್ವಜನಿಕರಿಗೆ ಉತ್ತಮ ಆಡಳಿತವನ್ನು ನೀಡುವುದು ಹೇಗೆ ತಾನೆ ಸಾಧ್ಯ. ಅಭ್ಯರ್ಥಿಗಳು ನಿರಂತರ ಹೋರಾಟ ನಡೆಸುತ್ತಿದ್ದರೂ ಇದರ ಬಗ್ಗೆ ಗಮನ ಹರಿಸದೆ ಇರುವುದು ಸರ್ಕಾರದ ನಿರ್ಲಕ್ಷö್ಯ ಧೋರಣೆಯನ್ನು ತೋರುತ್ತದೆ. ಯುವಜನತೆಯೇ ನಮ್ಮ ರಾಜ್ಯದ ಶಕ್ತಿ. ಇಂತಹ ಯುವ ಸಮುದಾಯಕ್ಕೆ ಸೂಕ್ತ ಉದ್ಯೋಗಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ಕೂಡಲೇ ನೇಮಕಾತಿಗಳನ್ನು ನಡೆಸಬೇಕೆಂದು ಜೆಡಿಎಸ್. ಮುಖಂಡ ಸಿ.ಎಂ.ಆರ್. ಶ್ರೀನಾಥ್ ಒತ್ತಾಯಿಸಿದರು.
ಕೆ.ಪಿ.ಎಸ್.ಸಿ ನಡೆಸುವ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮಗಳು ಕಂಡುಬರುತ್ತಲೇ ಇದೆ. ಇದು ಅಭ್ಯರ್ಥಿಗಳಿಗೆ ಸೂಕ್ತವಾಗಿ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುವುದಿಲ್ಲ. ಈ ಸಂಬAಧ ಸಂಪೂರ್ಣವಾಗಿ ಕೆ.ಪಿ.ಎಸ್.ಸಿ ನ್ನು ರದ್ದು ಮಾಡಿ, ಕೆ.ಇ.ಎ ಮೂಲಕ ನೇಮಕಾತಿಗಳನ್ನು ನಡೆಸುವಂತಾಗಬೇಕು. ಸರ್ಕಾರವು ಸ್ಪರ್ಧಾರ್ಥಿಗಳ ಬೇಡಿಕೆಗಳನ್ನು ಕೂಡಲೇ ಪೂರೈಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯು ಜೊತೆಯಾಗಿ ನಿಲ್ಲುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಕೆ. ರಾಘವೇಂದ್ರ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್, ಸಂಪನ್ಮೂಲ ವ್ಯಕ್ತಿ ಎಸ್.ಆರ್.ರಾಖೇಶ್, ಅಭ್ಯರ್ಥಿಗಳಾದ ಜಿ. ಅಂಬರೀಶ್, ಕೆ.ಎಂ. ವೆಂಕಟೇಶ್, ಜಿತೇಂದ್ರ, ಸಂತೋಷ್, ಪ್ರವೀಣ್, ದೇವರಾಜ್, ಬ್ಯಾಟರಾಯ, ದರ್ಶನ್, ಗಂಗರಾಜು, ನರೇಶ್, ಶಾಂತಪ್ಪ, ಎಸ್. ಮುಕ್ತಾನಂದ, ಎಂ.ಸಿ. ಪ್ರಸನ್ನ, ಕಿರಣ್ ಕುಮಾರ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್