
ವಿಜಯಪುರ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ ೬ ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ ನಡೆಸುವಂತೆ ಸಿಇಓ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು ನಾಸೀರ್ ಅಹ್ಮೆದ್ ಹೇಳಿದರು.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿರುವ ೬ ವರ್ಷದ ಮಕ್ಕಳ ಸಂಖ್ಯೆ ಲಭ್ಯವಿದ್ದರೂ ಶಾಲೆಯಿಂದ ಅನೇಕ ಮಕ್ಕಳು ಹೊರಗುಳಿದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಆರು ವರ್ಷದ ಮಕ್ಕಳ ನಿಖರ ದತ್ತಾಂಶ ಸಂಗ್ರಹಣೆ ಇಲ್ಲದಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಮಾಹಿತಿ ಸಂಗ್ರಹಣೆಗೆ ಪ್ರಯತ್ನ ನಡೆಯುತ್ತಿದೆ ಎಂದರು.
೧೦೦ ಮಕ್ಕಳಲ್ಲಿ ೬ ವರ್ಷದವರು ಇದ್ದರೆ ಅದರಲ್ಲಿ ಸುಮಾರು ೮೦ ಮಕ್ಕಳು ಮಾತ್ರ ಶಾಲೆಗೆ ಸೇರಿರುವ ಸಾಧ್ಯತೆ ಇದೆ. ಆದರೆ ಶಾಲೆಯಲ್ಲಿ ಇಲ್ಲದ ಉಳಿದ ಮಕ್ಕಳ ನಿಖರ ಸಂಖ್ಯೆಯ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ಅಗತ್ಯ ಕಾರ್ಯಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ೩ ತಿಂಗಳೊಳಗೆ ಈ ದತ್ತಾಂಶ ಸಂಗ್ರಹಣೆಯ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.ಇದು ಪೈಲಟ್ ಪ್ರಾಜೆಕ್ಟ್ ಮಾದರಿಯಲ್ಲಿ ಆರಂಭಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಅನುಷ್ಠಾನ ಹಾಗೂ ಸರ್ಕಾರದ ಸೌಲಭ್ಯಗಳು ಅಲ್ಪಸಂಖ್ಯಾತರಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಸುದೀರ್ಘ ಸಭೆ ನಡೆಸಿ ಸಂಬಂಧಿಸಿದ ಇಲಾಖೆಗಳೊಂದಿಗೆ ಪರಾಮರ್ಶೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಅಥವಾ ಅಪ್ರಸ್ತುತ ಸಂದೇಶಗಳನ್ನು ನೇರವಾಗಿ ಡಿಲೀಟ್ ಮಾಡುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಆದರೆ ಪೋಸ್ಟ್ ಮಾಡಿದವರಿಗೆ ಅದನ್ನು ಅಳಿಸಲು ಸೂಚನೆ ನೀಡುವ ಅಧಿಕಾರ ಇದೆ. ಈ ನಿಟ್ಟಿನಲ್ಲಿ ವಿಜಯಪುರ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷದಲ್ಲಿ ಅಸಭ್ಯ ರೀತಿಯ ೨೧ ಪೋಸ್ಟ್ಗಳನ್ನು ಅಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವರ್ಷವೂ ಈಗಾಗಲೇ ೨೧ ಪೋಸ್ಟ್ಗಳನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆಯೋಗ ವಿಶೇಷ ಗಮನ ಹರಿಸಿದೆ. ಈ ಸಂಬಂಧ ಅಲ್ಪಸಂಖ್ಯಾತ ಆಯೋಗ ಮೊದಲ ಬಾರಿಗೆ ಉದ್ಯೋಗ ಮೇಳ ಆಯೋಜಿಸಿದ್ದು, ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ೨೦೦ಕ್ಕೂ ಹೆಚ್ಚು ಕಂಪನಿಗಳನ್ನು ಆಹ್ವಾನಿಸಲಾಗಿತ್ತು. ಸಾವಿರಾರು ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಆದೇಶ ಪತ್ರ ನೀಡುವ ಕಾರ್ಯ ನಡೆದಿದೆ ಎಂದು ಹೇಳಿದರು.
ಉದ್ಯೋಗ ಹಾಗೂ ಜ್ಞಾನ ಮಾಹಿತಿ ಒದಗಿಸುವ ಎಂಪ್ಲಾಯಿಮೆಂಟ್ ಪ್ಲಾಟ್ಫಾರ್ಮ್ನ್ನು ಆಯೋಗದ ಜಾಲತಾಣದ ಮೂಲಕ ರೂಪಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯವೂ ಕೈಗೊಳ್ಳಲಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಒಂದೂವರೆ ವರ್ಷದಿಂದ ಈ ಜವಾಬ್ದಾರಿ ವಹಿಸಿಕೊಂಡಿದ್ದು, ಸಮಾಜದಲ್ಲಿ ಸಾಮರಸ್ಯ ಹಾಗೂ ಸದ್ಭಾವನೆ ಮೂಡಿಸುವ ನಿಟ್ಟಿನಲ್ಲಿ ಸರ್ವಧರ್ಮ ಸಾಧಕರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಇಓ ರಿಷಿ ಆನಂದ ಸೇರಿದಂತೆ ಅಲ್ಪಸಂಖ್ಯಾತ ಇಲಾಖೆ ಮತ್ತು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / jyothi deshpande