
ವಿಜಯಪುರ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗಣತಿದಾರರು ಹಾಗೂ ಮೇಲ್ವಿಚಾರಕರು ಸಮರ್ಪಕವಾಗಿ ತರಬೇತಿ ಪಡೆದು ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ ಆನಂದ. ಕೆ ಹೇಳಿದರು.
ನಗರದ ಸಿಕ್ಯಾಬ್ ಕಾಲೇಜು ಆವರಣದಲ್ಲಿ ನಡೆದ ಜನಗಣತಿ-2027ರ ಮೇಲ್ವಿಚಾರಕರ ಮತ್ತು ಗಣತಿದಾರರ ತರಬೇತಿ ಕಾರ್ಯಾಗಾರವನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಜನಗಣತಿಯು ದೇಶದ ಜನಸಂಖ್ಯೆಯಷ್ಟೇ ಅಲ್ಲದೆ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ದಾಖಲಿಸುವ ಮಹತ್ವದ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಆದ್ದರಿಂದ ತರಬೇತಿ ಪಡೆದ ಬಳಿಕ ಗಣತಿ ಕಾರ್ಯಕ್ಕೆ ತೆರಳುವಾಗ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ ಅವರನ್ನು ಗಣತಿ ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಈ ಮೂಲಕ ಜಿಲ್ಲೆಯ ಯಾವುದೇ ವ್ಯಕ್ತಿ ಜನಗಣತಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ದೇಶದಲ್ಲಿ ಡಿಜಿಟಲ್ ಜನಗಣತಿ ಕಾರ್ಯ ಆರಂಭವಾಗಿದ್ದು, ಎರಡು ಹಂತಗಳಲ್ಲಿ ಈ ಕಾರ್ಯ ನಡೆಯಲಿದೆ. ಗಣತಿದಾರರು ವಿಶೇಷ ಕಾಳಜಿ ವಹಿಸಿ ಗಣತಿ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು ಎಂದು ಹೇಳಿದರು.
ಈಗಾಗಲೇ ಸ್ವಯಂ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ಗೆ ಲಾಗಿನ್ ಆಗಿ ತಮ್ಮ ಸ್ಥಳವನ್ನು ಆಯ್ಕೆ ಮಾಡಿ ಮನೆಯ ವಿವರಗಳನ್ನು ನಮೂದಿಸಿ ನಮೂದಿಸಿದ ಗುರುತು ಚೀಟಿ ಪಡೆಯಬಹುದು. ಆ ಐಡಿಯನ್ನು ಸುರಕ್ಷಿತವಾಗಿ ಇಟ್ಟುಕೊಂಡು ಗಣತಿದಾರರು ಮನೆಗೆ ಬಂದಾಗ ಹಂಚಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಲಿದ್ದಾರೆ. ಒಂದು ವೇಳೆ ಸಾರ್ವಜನಿಕರು ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಗಣತಿದಾರರು ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಗಣತಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಮಾಹಿತಿಯನ್ನು ಶೇ.100ರಷ್ಟು ಗೌಪ್ಯವಾಗಿ ಕಾಯ್ದುಕೊಳ್ಳಲಾಗುವುದು ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಗಣತಿದಾರರಿಗೆ ಸೂಚಿಸಿದರು.
ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ ವೆಬ್ ಪೋರ್ಟಲ್ ಲಭ್ಯವಿದ್ದು, ಮೊಬೈಲ್, ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ಮೂಲಕ ಮಾಹಿತಿ ಸಲ್ಲಿಸಬಹುದು. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ ನಿಖರ ಹಾಗೂ ಸಮಗ್ರ ಮಾಹಿತಿ ಸಂಗ್ರಹಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande