
ಕೊಪ್ಪಳ, 07 ಏಪ್ರಿಲ್ (ಹಿ.ಸ.)
ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಬಲ್ಡೋಟ ತೊಲಗಿಸಿ ಹೋರಾಟ 159ನೇ ದಿನ ಪೂರೈಸಿತು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಶಿಫಾರಸಿನಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಸ್ಪಾಂಜ್ ಐರನ್ ಘಟಕಗಳನ್ನು ಅತಿ ಶೀಘ್ರವಾಗಿ ಮುಚ್ಚಿ ಸಂತ್ರಸ್ತ ಹಳ್ಳಿಗಳ ಜನರ ಜೀವ ಉಳಿಸಬೇಕು. ಬಲ್ಡೋಟ ಅತಿಕ್ರಮಣ ಮಾಡಿರುವ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಜಾನುವಾರು ನೀರು ಕುಡಿಯಲು ಕಾಂಪೌಂಡ್ ತೆರವುಗೊಳಿಸಬೇಕು, ತುಂಗಭದ್ರಾ ಜಲಾಶಯ ವಿಷಗೊಳಿಸಿದ ಕಾರ್ಖಾನೆಗಳನ್ನು ಸೀಜ್ ಮಾಡಬೇಕು, 22 ಹಳ್ಳಿಗಳು ಕಾರ್ಖಾನೆ ಮಾಲಿನ್ಯದಿಂದ ಬಾಧಿತವಾಗಿದ್ದು ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ನಡೆದ ಅನಿರ್ದಿಷ್ಟಾವಧಿ ಧರಣಿಯನ್ನು ಉದ್ದೇಶಿಸಿ ಹಿರಿಯ ಸಾಹಿತಿ, ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಇದುವರೆಗೆ ಹೋರಾಟಕ್ಕೆ ಪ್ರೇರಣೆಯಾಗಿ ಸಾಹಿತಿಗಳು ಹಲವರು ಪರಿಸರ ಜಾಗೃತಿಯ, ಕಾರ್ಖಾನೆ ಮಾಲಿನ್ಯ, ಬಾಧಿತ ಹಳ್ಳಿಯ ಜನ, ಭವಿಷ್ಯ, ಆರೋಗ್ಯ, ಅಪಾಯದ ಕುರಿತು ಕವನ ರಚಿಸಿ ವೇದಿಕೆಯಲ್ಲಿ ವಾಚನ ಮಾಡಿದ್ದಾರೆ. ಸೃಜನಶೀಲ ವಿಚಾರ, ಜೀವಪರ ಕಾಳಜಿಯ ಕೆಲಸ ಚಳವಳಿಯ ಶಕ್ತಿಯಾಗಿದೆ. ಈ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ವೇದಿಕೆ ನಿರ್ಣಯಿಸಿದೆ. ಹೊಸದಾಗಿ ಕವನ ಬರೆದು ವಾಚನ ಮಾಡುವವರು ಹೋರಾಟ ವೇದಿಕೆಗೆ ಬಂದು ಕವನ ವಾಚನ ಮಾಡಲು ವೇದಿಕೆ ಸ್ವಾಗತಿಸುತ್ತದೆ. ಅಂತಹ ಕವನಗಳನ್ನು ವೇದಿಕೆ ಮೂಲಕ ಕೃತಿ ರೂಪದಲ್ಲಿ ಪ್ರಕಟ ಮಾಡಲಾಗುವದು. ವೇದಿಕೆಗೆ ಬರಲು ಆಗದಿದ್ದರೆ ಅಂತವರು ಮೋ. ಸಂಖ್ಯೆ: 9844049205 ಸಂಪರ್ಕಿಸಿ ಅಥವಾ ನೇರವಾಗಿ ಅಲ್ಲಮಪ್ರಭು ಬೆಟ್ಟದೂರು, ಅಮರಚೇತನ, ಕಲ್ಯಾಣನಗರ, ಕಿನ್ನಾಳ ರಸ್ತೆ, ಕೊಪ್ಪಳ-583231 ಇಲ್ಲಿಗೆ ಅಂಚೆ ಮೂಲಕ ಕಳಿಸಬಹುದು ಎಂದರು.
ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಶಂಭುಲಿಂಗಪ್ಪ ಹರಗೇರಿ, ಪ್ರಕಾಶಕ ಡಿ.ಎಂ. ಬಡಿಗೇರ, ನಿಂಗಪ್ಪ ಜಿ. ಎಸ್. ಬೆಣಕಲ್, ಭರಮಾಜಿ ತಿಗರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಡಾ. ಬಸವರಾಜ ಪೂಜಾರ, ಎಂ.ಬಿ. ಕುರಿ ಬಿಕನಹಳ್ಳಿ, ರವಿ ಕಾಂತನವರ, ಸುರೇಶ ಹ್ಯಾಟಿ, ಈಶಪ್ಪ ದೊಡ್ಡಮನಿ, ನಾಗರಾಜ ಕುಷ್ಟಗಿ, ಬಸವರಾಜ ಕುರಿ, ಪಂಪಣ್ಣ ಚಿಂತಪಲ್ಲಿ, ಮಹಾದೇವಪ್ಪ ಮಾವಿನಮಡು, ಮಲ್ಲಪ್ಪ ಮಾದಿನೂರು, ವೈ. ಸತ್ಯನಾರಾಯಣ, ಬಸಪ್ಪ ಕಲಕೇರಿ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಭೀಮಪ್ಪ ಯಲಬುರ್ಗಾ, ಸುಂಕಮ್ಮ ಪಡಚಿಂತಿ, ಗಂಗಮ್ಮ ದೊಡ್ಡಮನಿ ಇನ್ನಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್