
ನವದೆಹಲಿ, 06 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ಎಲ್ಪಿಜಿ ಕೊರತೆ ಹಾಗೂ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಹಾಗೂ ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ ಮೂಲಕ ಪ್ರತಿಕ್ರಿಯಿಸಿದ ಅವರು, ಅಡುಗೆ ಅನಿಲವು ಈಗ ದಿನಗೂಲಿ ಕಾರ್ಮಿಕರ ಕೈಗೆಟುಕದ ವಸ್ತುವಾಗಿದೆ ಎಂದು ಹೇಳಿದ್ದಾರೆ. “500 ರಿಂದ 800 ರೂಪಾಯಿಗಳ ದೈನಂದಿನ ವೇತನ ಪಡೆಯುವ ವಲಸೆ ಕಾರ್ಮಿಕರಿಗೆ ಎಲ್ಪಿಜಿ ಖರೀದಿ ಮಾಡುವುದು ಅಸಾಧ್ಯವಾಗಿದೆ. ದಿನಪೂರ್ತಿ ದುಡಿದು ಮನೆಗೆ ಮರಳುವ ಕಾರ್ಮಿಕರ ಬಳಿ ಅಡುಗೆ ಮಾಡಲು ಬೇಕಾದಷ್ಟು ಹಣವೇ ಉಳಿಯುತ್ತಿಲ್ಲ,” ಎಂದು ಅವರು ತಿಳಿಸಿದ್ದಾರೆ.
ಸರ್ಕಾರವು ಈ ಬಿಕ್ಕಟ್ಟನ್ನು ಕೋವಿಡ್-19 ಸಾಂಕ್ರಾಮಿಕದಂತೆ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, “ಯಾವುದೇ ಸ್ಪಷ್ಟ ನೀತಿಯಿಲ್ಲ, ಯಾವುದೇ ಮಹತ್ವದ ಘೋಷಣೆಗಳಿಲ್ಲ; ಬಡವರ ಮೇಲೆ ಸಂಪೂರ್ಣ ಭಾರವನ್ನು ಹಾಕಲಾಗಿದೆ” ಎಂದು ಟೀಕಿಸಿದರು.
ಇಂತಹ ಪರಿಸ್ಥಿತಿಯಿಂದ ಕಾರ್ಮಿಕರು ನಗರಗಳನ್ನು ತೊರೆದು ಹಳ್ಳಿಗಳತ್ತ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. “ಜವಳಿ ಗಿರಣಿಗಳು ಮತ್ತು ಕಾರ್ಖಾನೆಗಳ ಬೆನ್ನೆಲುಬಾಗಿರುವ ಕಾರ್ಮಿಕರೇ ಕುಸಿಯುತ್ತಿದ್ದಾರೆ. ಜವಳಿ ಉದ್ಯಮ ಈಗಾಗಲೇ ಸಂಕಷ್ಟದಲ್ಲಿದ್ದು, ಉತ್ಪಾದನೆ ಕುಸಿಯುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಿಕ್ಕಟ್ಟಿನಲ್ಲೂ ಬಡವರೇ ಮೊದಲಿಗೆ ತೊಂದರೆ ಅನುಭವಿಸಬೇಕಾಗುವುದು ಏಕೆ ಎಂಬ ಪ್ರಶ್ನೆಯನ್ನು ಎತ್ತಿದ ರಾಹುಲ್ ಗಾಂಧಿ, “ಇದು ಕೇವಲ ಬಡವರ ಸಮಸ್ಯೆಯಲ್ಲ, ದೇಶದ ಸಮಗ್ರ ಆರ್ಥಿಕತೆಯ ಪ್ರಶ್ನೆಯಾಗಿದೆ” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa