
ಬೆಂಗಳೂರು, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರದ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ‘ವಾಯೇಜರ್ – ದ ನೆವರ್ ಎಂಡಿಂಗ್ ಜರ್ನಿ’ ಎಂಬ ನೂತನ ಆಕಾಶಮಂಡಲ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಲಾಯಿತು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್. ಬೋಸರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾರಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಇಸ್ರೋ ಮಾಜಿ ಅಧ್ಯಕ್ಷರಾದ ಎ. ಎಸ್. ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಬೋಸರಾಜು, ವಾಯೇಜರ್ ಅಭಿಯಾನವು ಮಾನವಕುಲದ ಜ್ಞಾನಾನ್ವೇಷಣೆಯ ಪ್ರತೀಕವಾಗಿದ್ದು, ಯುವಜನರಲ್ಲಿ ವಿಜ್ಞಾನಾಸಕ್ತಿ ಹೆಚ್ಚಿಸಲು ಇಂತಹ ಪ್ರದರ್ಶನಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು. ಕನ್ನಡ ಸೇರಿದಂತೆ ಹಲವು ಭಾಷೆಗಳ ಸಂದೇಶಗಳನ್ನು ಹೊತ್ತೊಯ್ಯುತ್ತಿರುವ ವಾಯೇಜರ್ ನೌಕೆಗಳು ನಮ್ಮ ಸಂಸ್ಕೃತಿಯ ಹೆಮ್ಮೆಯನ್ನು ಜಗತ್ತಿಗೆ ಪರಿಚಯಿಸುತ್ತಿವೆ ಎಂದು ಅವರು ಹೇಳಿದರು.
ಎ.ಎಸ್. ಕಿರಣ್ ಕುಮಾರ್ ಅವರು ಮಾತನಾಡಿ, ವಾಯೇಜರ್ ಮಿಷನ್ ಮಾನವ ಎಂಜಿನಿಯರಿಂಗ್ ಸಾಧನೆಯ ಶಿಖರವಾಗಿದ್ದು, ಈ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿ, ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಲು ನೆರವಾಗಲಿದೆ ಎಂದು ತಿಳಿಸಿದರು.
1977ರಲ್ಲಿ ನಾಸಾ ಉಡಾವಣೆ ಮಾಡಿದ ವಾಯೇಜರ್ ನೌಕೆಗಳ ಅದ್ಭುತ ಪಯಣವನ್ನು ಈ ಪ್ರದರ್ಶನವು ವಿವರಿಸುತ್ತದೆ. ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳ ದೃಶ್ಯಾವಳಿಗಳನ್ನು ಆಕರ್ಷಕ ಅನಿಮೇಷನ್ ಮೂಲಕ ಪ್ರದರ್ಶಿಸಲಾಗುತ್ತದೆ.
ಇತರ ನಕ್ಷತ್ರಗುಚ್ಛಗಳಲ್ಲಿ ಜೀವಿಗಳಿರಬಹುದಾದ ಸಾಧ್ಯತೆಯನ್ನು ಮನಗಂಡು ಕಳುಹಿಸಿದ ಸಂದೇಶಗಳನ್ನೂ ಈ ಪ್ರದರ್ಶನದಲ್ಲಿ ಪರಿಚಯಿಸಲಾಗಿದೆ.
‘ವಾಯೇಜರ್’ ಪ್ರದರ್ಶನದ ಅವಧಿ 33 ನಿಮಿಷಗಳಾಗಿದ್ದು, 24 ನಿಮಿಷಗಳ ಮುಖ್ಯ ಪ್ರದರ್ಶನ ಮತ್ತು 9 ನಿಮಿಷಗಳ ಮುನ್ನುಡಿ ಒಳಗೊಂಡಿದೆ. ಜೊತೆಗೆ ‘ಚಂದ್ರಯಾನ: ಭಾರತದ ರೋಮಾಂಚಕಾರಿ ಚಂದ್ರ ಪಯಣ’ ಟ್ರೈಲರ್ ಕೂಡ ಪ್ರದರ್ಶಿಸಲಾಗುತ್ತದೆ.
ಪ್ರದರ್ಶನವು ಏಪ್ರಿಲ್ 30ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.
ಪ್ರತಿ ಶೋಗೆ 200 ಆಸನಗಳಿದ್ದು, 150 ಟಿಕೆಟ್ಗಳನ್ನು BookMyShow ಮೂಲಕ ಆನ್ಲೈನ್ನಲ್ಲಿ ಬುಕ್ ಮಾಡಬಹುದಾಗಿದೆ. ಉಳಿದ ಟಿಕೆಟ್ಗಳನ್ನು ಕೌಂಟರ್ನಲ್ಲಿ ವಿತರಿಸಲಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa