

ಕೊಪ್ಪಳ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆಗೆ ಯಾವುದೇ ರೀತಿಯ ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯತ್ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಪಡಿತರ ಧಾನ್ಯಗಳನ್ನು ಮಾರಾಟಕ್ಕೆ ಅವಕಾಶವಿರುವುದಿಲ್ಲ. ಆದ್ಯಾಗೂ ಸಹ ಪಡಿತರ ಅಕ್ಕಿಯನ್ನು ಅಕ್ರಮ ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗಿದೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳುವುದರ ಜೊತೆಗೆ ಅವರ ಮೇಲೆ ಚಾರ್ಜ್ ಶೀಟ್ ಹಾಕುವ ವ್ಯವಸ್ಥೆಯಾಗಬೇಕು. ಅಕ್ರಮ ಪಡಿತರ ಚೀಟಿ ಮಾರಾಟಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದ್ದು, ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಪಡಿತರ ವಿತರಣೆಯನ್ನು ಜನರಿಗೆ ಅನುಕೂಲವಾಗುವಂತೆ ಮಾಡಿ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಬೇಕು.
ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಿ. ಆಹಾರ ಸಾಮಾಗ್ರಿಗಳ ವಿತರಣೆಗೂ ಮುನ್ನ ಅದರ ಗುಣಮಟ್ಟವನ್ನು ಪರಿಶೀಲಿಸಬೇಕು. ಈ ಬಗ್ಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಎಲ್ಲಾ ಅಧ್ಯಕ್ಷರು, ಸದಸ್ಯರು ಸಹ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಿಡಿಪಿಓ ಕಛೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಮರಣ ಹೊಂದಿದ ಫಲಾನುಭಿಗಳಿಗೆ ಸಹಾಯಧನ ಸಂದಾಯವಾಗುತ್ತಿದ್ದಲ್ಲಿ ತಕ್ಷಣ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗದಿರುವ ಅರ್ಜಿಗಳನ್ನು ಪರಿಶೀಲಿಸಿ, ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಯುವನಿಧಿ ಪ್ಲಸ್ ಉಪಕ್ರಮದಡಿಯಲ್ಲಿ ನೀಡುತ್ತಿರುವ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಯುವನಿಧಿ ಫಲಾನುಭವಿಗಳನ್ನು ನೋಂದಾಯಿಸಬೇಕು. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ ನಮ್ಮ ಜಿಲ್ಲೆಯಲ್ಲಿ ಸುಮಾರು 11 ಕೋಟಿ 22 ಲಕ್ಷಕ್ಕೂ ಅಧಿಕ ಮಹಿಳಾ ಫಲಾನುಭವಿಗಳು ಉಚಿತ ಬಸ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಜನ ಸಾಮಾನ್ಯರ ಏಳ್ಗೆಗಾಗಿ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿದಿ, ಈ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರದ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳು ಬಡ, ಹಿಂದುಳಿದ ವರ್ಗಗಳ ಹಾಗೂ ಜನ ಸಾಮಾನ್ಯರ ಬಧುಕಿಗೆ ಆಸರೆಯಾಗಿವೆ. ಈ ಯೋಜನೆಗಳಡಿ ನಮ್ಮ ಜಿಲ್ಲೆಯಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಈ ಬಗ್ಗೆ ಹೆಚ್ಚಿನ ಪ್ರಚಾರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಸಭೆ ನಡೆಯಬೇಕು. ಮೇ 16 ಮತ್ತು 17 ರಂದು ನಡೆಯುವ ಕನಕಗಿರಿ ಉತ್ಸವದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಮಳಿಗೆಗಳನ್ನು ಹಮ್ಮಿಕೊಂಡು ಜನರಿಗೆ ಹೆಚ್ಚಿನ ಪ್ರಚಾರ ಮೂಡಿಸಲು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಮಾತನಾಡಿ, ಅರ್ಜಿ ಹಾಕಿದ ಫಲಾನುಭವಿಗಳ ಪೈಕಿ ಕೆಲವರಿಗೆ ಗೃಹಲಕ್ಷ್ಮಿ ಯೋಜನೆ ಸಹಾಯಧನ ಸಿಗುತ್ತಿಲ್ಲ. ಇದಕ್ಕಾಗಿ ಸೂಕ್ತ ಕಾರಣ ಏನು ಮತ್ತು ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುವುದರ ಬಗ್ಗೆ ಫಲಾನುಭವಿಗಳಿಗೆ ತಿಳಿಸಬೇಕು. ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆಯಾ ಗ್ರಾ.ಪಂ.ಗಳಿಗೆ ತಿಳಿಸುವ ಕೆಲಸ ಆಗಬೇಕು. ಗ್ರಾಮ ಸಭೆಗಳಲ್ಲಿಯೇ ಗ್ಯಾ.ಪಂ ಮಟ್ಟದ ಗ್ಯಾರಂಟಿ ಸಭೆಗಳನ್ನು ನಡೆಸಲು ಎಲ್ಲಾ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಯುವನಿಧಿ ಪ್ಲಸ್ ಕಾರ್ಯಕ್ರಮ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಜಿಲ್ಲೆಯ ಎಲ್ಲಾ ಯುವನಿಧಿ ಫಲಾನುಭವಿಗಳು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಬಿ ಖಾದ್ರಿ, ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್.ಜಿ. ಅವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ 3,21,019 ಫಲಾನುಭವಿಗಳಿಗೆ ಆಗಸ್ಟ್-2023 ರಿಂದ ಫೆಬ್ರವರಿ-2026ರ ವರೆಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಮಾರ್ಚ್-2026ರ ಅಂತ್ಯದವರೆಗೆ 2,89,212 ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆತಿದ್ದು, ಇದಕ್ಕಾಗಿ ಇಲ್ಲಿಯವರೆಗೆ 388.23 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 3,63,521 ಪಡಿತರ ಕಾರ್ಡ್ಗಳಿದ್ದು, ಅನ್ನಭಾಗ್ಯ ಯೋಜನೆಯಡಿ ಏಪ್ರಿಲ್-2026ರ ವರೆಗೆ ಪ್ರತಿ ಸದಸ್ಯರಿಗೆ 10 ಕೆ.ಜಿ ಯಂತೆ 12,393 ಮೆ.ಟನ್ ಪಡಿತರ ಆಹಾರ ಪದಾರ್ಥ ಹಂಚಿಕೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಮಾರ್ಚ್-2026ರ ಮಾಹೆಯಲ್ಲಿ 34,84,433 ಮಹಿಳೆಯರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಈ ಯೋಜನೆಯಡಿ ಜೂನ್-2023 ರಿಂದ ಮಾರ್ಚ್-2026ರ ವರೆಗೆ ಕೊಪ್ಪಳ ಜಿಲ್ಲೆಯಲ್ಲಿ 11,22,17,504 ಮಹಿಳೆಯರು ಸೌಲಭ್ಯ ಪಡೆದುಕೊಂಡಿದ್ದಾರೆ. ಯುವನಿಧಿ ಯೋಜನೆಯಡಿ ಜನವರಿ-2026ರವರೆಗೆ 14,266 ಫಲಾನುಭವಿಗಳು ನೋಂದಣಿಯಾಗಿದ್ದು, ಜನವರಿ ಅಂತ್ಯದವರೆಗೆ ಒಟ್ಟು ಮೊತ್ತ ರೂ. 30,32,02,500 ಪಾವತಿಸಲಾಗಿರುತ್ತದೆ ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಪ್ರಾಧಿಕಾರದ ಸದಸ್ಯರು, ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ, ಇಲಾಖೆಗಳ ಅಧಿಕಾರಿಗಳು, ತಾ.ಪಂ ಇಓ.ಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್