
ಗದಗ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹಣ್ಣಿನ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಈ ಬಾರಿ ರೈತರ ಪಾಲಿಗೆ ಕಹಿಯಾಗಿದ್ದು, ಗದಗ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ದಿಢೀರ್ ಕುಸಿತ ಕಂಡಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಮಾವಿಗೆ ತಕ್ಕ ಬೆಲೆ ಸಿಗದೇ ರೈತರು ಕಂಗಾಲಾಗಿದ್ದು, ಕೆಲವರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಯಿಂದಲೇ ವಾಪಾಸ್ ತೆಗೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಬೇಸಿಗೆ ಆರಂಭವಾಗುತ್ತಿದ್ದಂತೆ ಮಾವಿನ ಹಣ್ಣಿಗೆ ಭಾರೀ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯಾಗಿದೆ. ಕಳೆದ ವಾರವರೆಗೆ ಉತ್ತಮ ದರ ಹೊಂದಿದ್ದ ಮಾವಿಗೆ ಈಗ ಏಕಾಏಕಿ ಬೆಲೆ ಕುಸಿತ ಕಂಡಿದೆ. ಗದಗ ಮಾರುಕಟ್ಟೆಯಲ್ಲಿ ಒಂದು ಟ್ರೀ (ಪೆಟ್ಟಿಗೆ) ಮಾವಿಗೆ ಕೇವಲ 600 ರಿಂದ 700 ರೂಪಾಯಿ ದರ ಮಾತ್ರ ಸಿಗುತ್ತಿದ್ದು, ಕಳೆದ ವಾರ ಇದೇ ಮಾವು 2500 ರಿಂದ 3000 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಈ ಭಾರೀ ವ್ಯತ್ಯಾಸ ರೈತರನ್ನು ಸಂಕಷ್ಟದ ಅಂಚಿಗೆ ತಳ್ಳಿದೆ.
ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ಉತ್ಪನ್ನವನ್ನು ಗದಗ ಮಾರುಕಟ್ಟೆಗೆ ತರಲಾಗಿದ್ದು, ಆದರೆ ನಿರೀಕ್ಷಿತ ಬೆಲೆ ಸಿಗದೇ ಆತಂಕಕ್ಕೆ ಒಳಗಾಗಿದ್ದಾರೆ. ಮಾರುಕಟ್ಟೆಯಲ್ಲಿ ಸರಕುಗಳ ಆಗಮನ ಹೆಚ್ಚಾಗಿರುವುದು ಮತ್ತು ವ್ಯಾಪಾರಿಗಳ ಬೇಡಿಕೆ ಕಡಿಮೆಯಾಗಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ಅಶಾಂತಿ, ವಿಶೇಷವಾಗಿ ಇರಾನ್-ಅಮೆರಿಕಾ ನಡುವಿನ ಉದ್ವಿಗ್ನತೆಯಿಂದ ವಿದೇಶಗಳಿಗೆ ಮಾವಿನ ರಫ್ತು ಕಡಿಮೆಯಾಗಿರುವುದೂ ಈ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ವ್ಯಾಪಾರ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ದೂರದ ಜಿಲ್ಲೆಗಳಿಂದ ಟ್ರಾನ್ಸ್ಪೋರ್ಟ್ ವೆಚ್ಚ ಮಾಡಿ ಮಾವು ತಂದ ರೈತರಿಗೆ ಈ ಬೆಲೆ ಕುಸಿತ ದೊಡ್ಡ ಹೊಡೆತವಾಗಿದೆ. “ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾವು ಬೆಳೆದಿದ್ದೇವೆ. ಆದರೆ ಇಲ್ಲಿ ಬಂದ ಮೇಲೆ ಒಂದು ಟ್ರೀಗೂ 600-700 ರೂಪಾಯಿ ಮಾತ್ರ ಕೊಡುತ್ತಿದ್ದಾರೆ. ಸಾರಿಗೆ ವೆಚ್ಚ ಕೂಡ ವಾಪಾಸ್ ಬರುತ್ತಿಲ್ಲ. ನಮ್ಮ ಗೋಳು ಯಾರಿಗೆ ಹೇಳೋದು?” ಎಂದು ರೈತ ಇಪ್ತಾಜ್ ನೋವು ವ್ಯಕ್ತಪಡಿಸಿದರು.
ಇದೇ ವೇಳೆ ಲಕ್ಷ್ಮೇಶ್ವರ ಭಾಗದ ರೈತ ಅನಸಾರಿ ಮಾತನಾಡಿ, “ರಸಗೊಬ್ಬರ, ಕೂಲಿ, ನೀರಾವರಿ ಸೇರಿದಂತೆ ಎಲ್ಲ ಖರ್ಚುಗಳು ಹೆಚ್ಚಾಗುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಮಾತ್ರ ಕುಸಿಯುತ್ತಿದೆ. ವಿದೇಶಗಳಿಗೆ ರಫ್ತು ಆಗದ ಕಾರಣದಿಂದ ರಾಜ್ಯದೊಳಗೆ ಸರಕು ತುಂಬಿಕೊಂಡಿದ್ದು, ಎಲ್ಲೆಡೆ ಬೆಲೆ ಕುಸಿತವಾಗಿದೆ. ಈ ಸ್ಥಿತಿ ಮುಂದುವರಿದರೆ ರೈತರ ಬದುಕು ಇನ್ನಷ್ಟು ಕಷ್ಟವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
ಕೆಲ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುವುದಕ್ಕಿಂತ ತಮ್ಮ ಉತ್ಪನ್ನವನ್ನು ವಾಪಾಸ್ ತೆಗೆದುಕೊಂಡು ಹೋಗುವುದೇ ಉತ್ತಮ ಎಂದು ನಿರ್ಧರಿಸಿದ್ದಾರೆ. ಮಾರುಕಟ್ಟೆಯಲ್ಲಿ ಓಪನ್ ಬೆಲೆಯಲ್ಲಿ ಮಾವಿಗೆ ಉತ್ತಮ ಬೆಲೆ ಇದ್ದರೂ, ಅದರ ಲಾಭ ರೈತರಿಗೆ ತಲುಪುತ್ತಿಲ್ಲ ಎಂಬುದು ಅವರ ಅಳಲಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ, ಹಣ್ಣಿನ ರಾಜ ಮಾವು ಈ ಬಾರಿ ರೈತರ ಪಾಲಿಗೆ ನಷ್ಟದ ಬೆಳೆಯಾಗಿದ್ದು, ಬೆಲೆ ಕುಸಿತದಿಂದ ಅನ್ನದಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಲೆ ಸ್ಥಿರೀಕರಣ ಕ್ರಮಗಳನ್ನು ಕೈಗೊಳ್ಳಬೇಕು, ರಫ್ತು ಮಾರ್ಗಗಳನ್ನು ಸುಗಮಗೊಳಿಸಬೇಕು ಮತ್ತು ರೈತರಿಗೆ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂಬ ಒತ್ತಾಯ ಜೋರಾಗಿದೆ. ರೈತರ ಬದುಕನ್ನು ಕಾಪಾಡಲು ತುರ್ತು ಕ್ರಮಗಳು ಅವಶ್ಯಕವೆಂದು ಕೃಷಿ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / lalita MP