
ವಿಜಯಪುರ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ವೇಳೆ ಬ್ರಾಹ್ಮಣ ವಿದ್ಯಾರ್ಥಿಯ ‘ಜನಿವಾರ’ವನ್ನು ತೆಗೆಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಪರಿಶೀಲಿಸಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ವಿಜಯಪುರ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಜಿಲ್ಲಾಧ್ಯಕ್ಷ ಮುಕುಂದ ಕುಲಕರ್ಣಿ ಮಾತನಾಡಿ, ಜನಿವಾರ ಧರಿಸುವುದು ಬ್ರಾಹ್ಮಣ ಸಮುದಾಯದ ಸಾಂಪ್ರದಾಯಿಕ ಗುರುತು ಹಾಗೂ ಗೌರವದ ಪ್ರತೀಕವಾಗಿದೆ. ಇಂತಹ ಗುರುತನ್ನು ತೆಗೆಸಿರುವುದು ಆಘಾತಕಾರಿ ಮತ್ತು ಖಂಡನಾರ್ಹ. ಜನಿವಾರದಿಂದ ಪರೀಕ್ಷೆಯಲ್ಲಿ ನಕಲು ಸಾಧ್ಯವಿಲ್ಲದಿದ್ದರೂ ಅನವಶ್ಯಕವಾಗಿ ಅದನ್ನು ತೆಗೆಸಿರುವುದು ಸಮಾಜಕ್ಕೆ ಅಪಮಾನವಾಗಿದೆ ಎಂದು ಹೇಳಿದರು. ಕಳೆದ ವರ್ಷವೂ ಇಂತಹ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದರೂ ಮತ್ತೆ ಪುನರಾವರ್ತನೆಯಾಗಿರುವುದು ವಿಷಾದನೀಯ ಎಂದು ಅವರು ಹೇಳಿದರು.
ರಾಜ್ಯ ಉಪಾಧ್ಯಕ್ಷ ಹಾಗೂ ಕಣ್ವ ಮಠ ವಿಜಯಪುರ ಶಾಖೆಯ ವಿಚಾರಣಾಧಿಕಾರಿ ರಾಘವೇಂದ್ರ ಆಲಗೂರ ಮಾತನಾಡಿ, ಈ ಘಟನೆಯಲ್ಲಿ ಭಾಗಿಯಾದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿರಿಯ ಅಧಿಕಾರಿಗಳನ್ನೊಳಗೊಂಡ ಎಸ್ಐಟಿ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇಂತಹ ಘಟನೆಗಳು ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ಸಮೀರ್ ಕುಲಕರ್ಣಿ, ನಗರಾಧ್ಯಕ್ಷ ಪ್ರಶಾಂತ ದೇಶಪಾಂಡೆ, ಯುವ ಘಟಕದ ಅಧ್ಯಕ್ಷ ರೋಹನ್ ಆಪ್ಟೆ, ಮಹಿಳಾ ಪ್ರಧಾನ ಕಾರ್ಯದರ್ಶಿ ಮಿತಾ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande