
ವಿಜಯಪುರ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ವಾರ್ಡ್ ನಂ.1 ಶಕ್ತಿ ನಗರದಲ್ಲಿ ಶಿವಶಿಂಪಿ ಸಮಾಜದ ನೂತನ ಸಮುದಾಯ ಭವನವನ್ನು ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇಂದು ಲೋಕಾರ್ಪಣೆಗೊಳಿಸಿದರು.
ಭವನ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಇಂತಹ ಸಮುದಾಯ ಭವನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಶಿವಶಿಂಪಿ ಸಮಾಜವು ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದಲ್ಲಿ ಉತ್ತಮ ಬದಲಾವಣೆ ತರುವಲ್ಲಿ ಮುಂದಾಗಬೇಕು. ಇಂತಹ ಮೂಲಸೌಕರ್ಯಗಳು ಸಮುದಾಯದ ಒಗ್ಗಟ್ಟನ್ನು ಬಲಪಡಿಸಿ, ವಿವಿಧ ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತವೆ ಎಂದು ಅವರು ಹೇಳಿದರು. ಸಮಾಜದ ಎಲ್ಲಾ ವರ್ಗಗಳೂ ಒಂದಾಗಿ ಪ್ರಗತಿಯತ್ತ ಸಾಗುವ ಅಗತ್ಯವಿದೆ ಎಂದು ಕೂಡ ಅವರು ಒತ್ತಿ ಹೇಳಿದರು.ಈ ಸಂದರ್ಭದಲ್ಲಿ ಸಮಾಜದ ವತಿಯಿಂದ ಯತ್ನಾಳರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಸಮಾಜದ ಅಭಿವೃದ್ಧಿಗೆ ತಮ್ಮ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಯರನಾಳ ವಿರಕ್ತಮಠದ ಪರಮಪೂಜ್ಯ ಸಂಗನಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿ, ಸಮಾಜದ ಏಕತೆ ಮತ್ತು ಧಾರ್ಮಿಕ ಮೌಲ್ಯಗಳ ಮಹತ್ವವನ್ನು ವಿವರಿಸಿದರು. ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಹಕಾರ ಮನೋಭಾವ ಬೆಳೆಸಿಕೊಳ್ಳುವುದು ಅತ್ಯವಶ್ಯಕವೆಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಶಿವಶಿಂಪಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande