ಬಾಗಲಕೋಟೆಯಲ್ಲಿ ಬಿಸಿಲ ಧಗಧಗ ; 114 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ
ಬಾಗಲಕೋಟೆ, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೇ ಏರುತ್ತಿರುವ ಬಿಸಿಲಿನ ತಾಪಮಾನದಿಂದ ಕೆರೆ-ಕಟ್ಟೆಗಳು ಒಣಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಗಂಭೀರ ರೂಪ ಪಡೆಯುವ ಸಾಧ್ಯತೆ ವ್ಯಕ್ತವಾಗಿದೆ. ಮೇ ತಿಂಗಳ ಅಂತ್ಯಕ್ಕೆ ಜಿಲ್ಲೆಯ ಸುಮಾರು 114 ಗ್ರಾಮಗಳಲ್ಲಿ ಜಲಕ
Summer


ಬಾಗಲಕೋಟೆ, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೇ ಏರುತ್ತಿರುವ ಬಿಸಿಲಿನ ತಾಪಮಾನದಿಂದ ಕೆರೆ-ಕಟ್ಟೆಗಳು ಒಣಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಗಂಭೀರ ರೂಪ ಪಡೆಯುವ ಸಾಧ್ಯತೆ ವ್ಯಕ್ತವಾಗಿದೆ.

ಮೇ ತಿಂಗಳ ಅಂತ್ಯಕ್ಕೆ ಜಿಲ್ಲೆಯ ಸುಮಾರು 114 ಗ್ರಾಮಗಳಲ್ಲಿ ಜಲಕ್ಷಾಮ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕುಡಿಯುವ ನೀರಿನ ನಿರ್ವಹಣೆ ಕುರಿತು ಎರಡು ಸುತ್ತಿನ ಮಹತ್ವದ ಸಭೆಗಳನ್ನು ನಡೆಸಿದೆ.

ಜಿಲ್ಲಾಧಿಕಾರಿ ಸಂಗಪ್ಪ ಅವರ ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳಲ್ಲಿ 52 ಗ್ರಾಮಗಳು ಹಾಗೂ ಮೇ ತಿಂಗಳಲ್ಲಿ 62 ಗ್ರಾಮಗಳು ಸೇರಿ ಒಟ್ಟು 114 ಹಳ್ಳಿಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಮಸ್ಯೆ ಎದುರಾಗುವ ಮುನ್ನವೇ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸದ್ಯ ಇಳಕಲ್ ಮತ್ತು ಗುಳೇದಗುಡ್ಡದ ತಲಾ ಒಂದು ಗ್ರಾಮದಲ್ಲಿ ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ. ಜಲಕ್ಷಾಮವನ್ನು ತಗ್ಗಿಸಲು ನದಿಗಳಿಗೆ ಸಹ ನೀರು ಹರಿಸಲಾಗುತ್ತಿದೆ. ಏಪ್ರಿಲ್ 2 ರಂದು ಘಟಪ್ರಭಾ ನದಿಗೆ 1.10 ಟಿಎಂಸಿ ಹಾಗೂ ಏಪ್ರಿಲ್ 10 ರಂದು ಮಲಪ್ರಭಾ ನದಿಗೆ 1 ಟಿಎಂಸಿ ನೀರು ಬಿಡಲಾಗಿದೆ.

ಇನ್ನು ಹಿಪ್ಪರಗಿ ಬ್ಯಾರೇಜ್ನಲ್ಲಿ ಸದ್ಯ 1.48 ಟಿಎಂಸಿ ನೀರು ಸಂಗ್ರಹವಿದ್ದು, ಮೇ ಅಂತ್ಯದವರೆಗೂ ಕುಡಿಯುವ ನೀರಿಗೆ ದೊಡ್ಡ ಮಟ್ಟದ ಸಮಸ್ಯೆ ಎದುರಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಆದಾಗ್ಯೂ, ಸಾರ್ವಜನಿಕರು ನೀರನ್ನು ವ್ಯರ್ಥ ಮಾಡದೆ ಹಿತಮಿತವಾಗಿ ಬಳಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಉಂಟಾಗುತ್ತಿರುವ ಬಿಸಿಲಿನ ತೀವ್ರತೆ ಹಾಗೂ ನೀರಿನ ಕೊರತೆ ಹಿನ್ನೆಲೆ, ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಎಲ್ಲರಿಗೂ ಅಗತ್ಯವಾಗಿದ್ದು, ಜಾಗೃತಿಯೇ ಪರಿಹಾರವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande