
ವಿಜಯಪುರ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 135ನೇ ಜಯಂತಿ ಉತ್ಸವದ ಅಂಗವಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಜಂಬಗಿ ಎಚ್. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಬೃಹತ್ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ ಮತ್ತು ಜಂಬಗಿಯ ಡಾ. ಬಿ.ಆರ್. ಅಂಬೇಡ್ಕರ್ ತರುಣ ಸಂಘದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಈ ಶಿಬಿರವನ್ನು ನಡೆಸಲಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ಹತ್ತಿರಕ್ಕೆ ತರುವ ಮಹತ್ವದ ಪ್ರಯತ್ನವಾಗಿ ಪರಿಣಮಿಸಿತು.
ಈ ಶಾಲೆಯು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, 1970ರ ಏಪ್ರಿಲ್ 25ರಂದು ಅಂದಿನ ಮೈಸೂರು ರಾಜ್ಯದ ಪೌರಾಡಳಿತ ಸಚಿವ ಬಿ. ಎಂ. ಪಾಟೀಲ ಅವರು ಉದ್ಘಾಟಿಸಿದ್ದರು.
ಶತಮಾನೋತ್ಸವದ ಈ ಸಂದರ್ಭದಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡಿರುವುದು ವಿಶೇಷ ಮಹತ್ವ ಪಡೆದಿದೆ. ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಿ.ಎಸ್.ಆರ್ ಅನುದಾನದಡಿ ಹೊಸ ಕೊಠಡಿಗಳು, ಶೌಚಾಲಯ ಮತ್ತು ಕ್ರೀಡಾ ಸಾಮಗ್ರಿಗಳನ್ನು ಮಂಜೂರು ಮಾಡಿರುವುದು ಗಮನಾರ್ಹವಾಗಿದೆ.
ಕಾರ್ಯಕ್ರಮವನ್ನು ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ವಿವಿಧ ವಿಭಾಗಗಳ ತಜ್ಞ ವೈದ್ಯರು ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡಿದರು. ವೈದ್ಯಕೀಯ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು, ಹೆರಿಗೆ ಮತ್ತು ಪ್ರಸೂತಿ, ಮಕ್ಕಳ ಆರೋಗ್ಯ, ಚರ್ಮರೋಗ, ನೇತ್ರ ಮತ್ತು ದಂತ ಚಿಕಿತ್ಸಾ ವಿಭಾಗಗಳ ತಜ್ಞರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಜಂಬಗಿ ಎಚ್. ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಈ ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಗ್ರಾಮೀಣ ಭಾಗದಲ್ಲಿ ಇಂತಹ ಆರೋಗ್ಯ ಶಿಬಿರಗಳು ಜನರಿಗೆ ಬಹಳ ಉಪಯುಕ್ತವಾಗಿವೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಎಚ್.ಎಸ್. ಕೋರಡ್ಡಿ, ಕಲ್ಲಪ್ಪಗೌಡ ಕೊಡಬಾಗಿ, ಎಚ್.ಕೆ. ನ್ಯಾಮಗೌಡ, ದುಂಡಣ್ಣಗೌಡ ಕೋರಡ್ಡಿ, ಪಿ.ವಿ. ಚಿಗದಾನಿ, ತಿಮ್ಮನಗೌಡ ಪಾಟೀಲ, ಹನುಮಂತ ಕಜ್ಜಿದೋಣಿ, ಭೀಮಪ್ಪ ಕಜ್ಜಿದೋಣಿ ಸೇರಿದಂತೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಡಾ. ಬಿಆರ್ ಅಂಬೇಡ್ಕರ್ ತರುಣ ಸಂಘದ ಸದಸ್ಯರು, ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / jyothi deshpande