
ಬೆಂಗಳೂರು, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದ ಜಾಗತಿಕ ಹಬ್ ಆಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ‘ಕ್ವಾಂಟಮ್ ಸಿಟಿ’ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರ್ಕಾರ ಗಂಭೀರ ವೇಗ ನೀಡಿದ್ದು, 2028ರೊಳಗೆ ಗಮನಾರ್ಹ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಹೆಸರಘಟ್ಟದ ಸಮೀಪ ಕ್ವಾಂಟಮ್ ಸಿಟಿಗಾಗಿ ಮಂಜೂರಾದ 6.23 ಎಕರೆ ಭೂಮಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, “ಈ ಯೋಜನೆ 2035ರ ವೇಳೆಗೆ ರಾಜ್ಯದಲ್ಲಿ 20 ಬಿಲಿಯನ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ನಿರ್ಮಿಸುವ ದಿಟ್ಟ ದೃಷ್ಟಿಯ ಭಾಗವಾಗಿದೆ” ಎಂದು ಹೇಳಿದರು.
ಕ್ವಾಂಟಮ್ ಸಿಟಿಯಲ್ಲಿ ಪೈಲೆಟ್ ಫ್ಯಾಬ್ರಿಕೇಶನ್ ಲೈನ್ಸ್, ಉನ್ನತ ಮಟ್ಟದ ಸಂಶೋಧನಾ ಪ್ರಯೋಗಾಲಯಗಳು, ಕಾಮನ್ ಕಂಪ್ಯೂಟಿಂಗ್ ಮೂಲಸೌಕರ್ಯ ಹಾಗೂ ಸ್ಟಾರ್ಟ್ಅಪ್ಗಳಿಗೆ ವಿಶೇಷ ಇನ್ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಸಂಶೋಧಕರು ಹಾಗೂ ಉದ್ಯಮಿಗಳಿಗೆ ಒಂದೇ ವೇದಿಕೆಯಲ್ಲಿ ಅತ್ಯಾಧುನಿಕ ತಾಂತ್ರಿಕ ಬೆಂಬಲ ದೊರೆಯಲಿದೆ ಎಂದು ವಿವರಿಸಿದರು.
ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಜಾರಿಗೆ ತರುವ ಕುರಿತು ಐಐಎಸ್ಸಿ ಪ್ರೊ. ಅರಿಂಧಮ್ ಘೋಷ್ ನೇತೃತ್ವದ ಟಾಸ್ಕ್ಫೋರ್ಸ್ ಜೊತೆ ಶೀಘ್ರದಲ್ಲೇ ಚರ್ಚೆ ನಡೆಸಲಾಗುವುದು. “ಭೌತಿಕ ನಿರ್ಮಾಣದ ಮಟ್ಟದಲ್ಲಿ 2028ರೊಳಗೆ ಸ್ಪಷ್ಟ ಬದಲಾವಣೆ ಕಾಣುವಂತೆ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಸಚಿವರು ಹೇಳಿದರು.
ಭೂ ಪರಿಶೀಲನೆ ಬಳಿಕ ಸಚಿವರು ಅಂತರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ ಕ್ಯಾಂಪಸ್ಗೆ ಭೇಟಿ ನೀಡಿ, ಕ್ವಾಂಟಮ್ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂಸ್ಥೆ ಕ್ವಾಂಟಮ್ ಸಿಟಿಯ ವೈಜ್ಞಾನಿಕ ಅಭಿವೃದ್ಧಿಗೆ ಪ್ರಮುಖ ಆಧಾರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ K-STEPS ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು, ಸಚಿವರ ಆಪ್ತ ಕಾರ್ಯದರ್ಶಿ ವೀರಭದ್ರ ಹಂಚಿನಾಳ್, ICTS ನಿರ್ದೇಶಕ ಪ್ರೊ. ರಾಜೇಶ್ ಗೋಪಕುಮಾರ್ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa