
ಬಾಗಲಕೋಟೆ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹಿರಿಯ ನಾಗರಿಕರ ಸುರಕ್ಷತೆ, ಗೌರವ ಮತ್ತು ಆರೈಕೆಯನ್ನು ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆಯು ಜಾರಿಗೆ ತಂದಿರುವ ‘ಆಸರೆ’ ಸಮುದಾಯ ಪೊಲೀಸ್ ಯೋಜನೆಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಸನಾಳ ಗ್ರಾಮದ ಹಿರಿಯ ನಾಗರಿಕರಾದ ಗಂಗವ್ವ ಉಪ್ಪಾರ್ ಅವರನ್ನು ಬೀಟ್ ಪೊಲೀಸರು ಭೇಟಿ ನೀಡಿ ಅವರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ವಿಚಾರಿಸಿದರು. ಅಲ್ಲದೆ, ಹಣ್ಣು ಹಂಪಲು ನೀಡಿ ಆತ್ಮೀಯವಾಗಿ ಮಾತನಾಡಿ, ಯಾವುದೇ ತೊಂದರೆ ಎದುರಾದರೂ ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿದರು.
“ಯಾರಿಂದಾದರೂ ಕಿರಿಕಿರಿ ಅಥವಾ ಸಮಸ್ಯೆ ಉಂಟಾದರೆ ತಕ್ಷಣವೇ ಮಾಹಿತಿ ನೀಡಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೂ ಬೀಟ್ ಪೊಲೀಸರಿಗೆ ತಿಳಿಸಬಹುದು. ‘ಆಸರೆ’ ಯೋಜನೆಯ ಮೂಲಕ ನಿಮಗೆ ಸದಾ ಸಹಾಯ ಸಹಕಾರ ದೊರೆಯಲಿದೆ” ಎಂದು ಪೊಲೀಸರು ಭರವಸೆ ನೀಡಿದರು.
ಇದೇ ವೇಳೆ ತುರ್ತು ಸಂದರ್ಭಗಳಲ್ಲಿ 112 ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿ, “ಪೊಲೀಸರು ನಿಮ್ಮ ರಕ್ಷಕರು; ಭಯಪಡುವ ಅಗತ್ಯವಿಲ್ಲ, ಭರವಸೆ ಇರಿ” ಎಂದು ಹಿರಿಯ ನಾಗರಿಕರಿಗೆ ಆತ್ಮಸ್ಥೈರ್ಯ ತುಂಬಿದರು.
ಬೀಳಗಿ ಪೊಲೀಸ್ ಠಾಣೆಯ ಈ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮುದಾಯ ಪೊಲೀಸ್ ವ್ಯವಸ್ಥೆಯು ಜನರಲ್ಲಿ ವಿಶ್ವಾಸ ಹೆಚ್ಚಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / jyothi deshpande