ಪಿಎಚ್.ಡಿ ಗೌರವಕ್ಕೆ ಪಾತ್ರವಾದ ಜಾನಪದ ಕಣಜ ಪಾರ್ವತೆವ್ವ ಹೊಂಗಲ್
ಪಿಎಚ್ಡಿ
ಪಾರ್ವತೆವ್ವ ಹೊಂಗಲ


ಪಾರ್ವತೆವ್ವ ಹೊಂಗಲ್


ಧಾರವಾಡ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲೆಯ ಮಣ್ಣಿನಿಂದ ಹೊರಹೊಮ್ಮಿದ ಅಪರೂಪದ ಜಾನಪದ ಪ್ರತಿಭೆ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್ ಅವರು, ತಮ್ಮ ಕಂಠದಲ್ಲಿ ಸಾವಿರಾರು ವರ್ಷಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿಟ್ಟಿರುವ ಜೀವಂತ ಜಾನಪದ ಭಂಡಾರವಾಗಿದ್ದಾರೆ. ಪಾರ್ವತೆವ್ವ ಹಾಡಿದರೆ ಅದು ಕೇವಲ ಹಾಡಾಗುವುದಿಲ್ಲ—ಅದು ಹಳ್ಳಿಯ ಸಂಸ್ಕಾರ, ಬದುಕಿನ ಮೌಲ್ಯಗಳು ಮತ್ತು ಪೀಳಿಗೆಯ ಜ್ಞಾನವನ್ನು ಹೊತ್ತ ಸಾಗರವಾಗುತ್ತದೆ.

1956ರಲ್ಲಿ ಧಾರವಾಡ ಸಮೀಪದ ದೇವರಹುಬ್ಬಳ್ಳಿ ಗ್ರಾಮದಲ್ಲಿ ಜನಿಸಿದ ಪಾರ್ವತೆವ್ವ ಅವರು ಕೇವಲ ಎರಡನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರೂ, ಅವರ ಜ್ಞಾನ ಮತ್ತು ಸ್ಮರಣಾಶಕ್ತಿ ಅಚ್ಚರಿ ಮೂಡಿಸುವಂತದ್ದು. ಹಿರಿಯರಿಂದ ಕೇಳಿ ಕಲಿತ ಮೌಖಿಕ ಪರಂಪರೆಯ ಮೂಲಕ ಅವರು 550ಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಕಂಠಪಾಠ ಮಾಡಿಕೊಂಡಿದ್ದಾರೆ. ಈ ಹಾಡುಗಳಲ್ಲಿ ಅಂದಾಜು 35 ಸಾವಿರಕ್ಕೂ ಹೆಚ್ಚು ಜಾನಪದ ಶಬ್ದ ಸಂಪತ್ತಿದ್ದು, ಸಂಶೋಧಕರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ. ಇದುವರೆಗೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪಿಎಚ್‌.ಡಿ ಮತ್ತು ಎಂ.ಫಿಲ್ ಸಂಶೋಧನೆಗಳಲ್ಲಿ ಇವರ ಹಾಡುಗಳನ್ನು ದಾಖಲಿಸಿದ್ದಾರೆ.

ಬಡತನದ ನಡುವೆ ಕೃಷಿ ಕುಟುಂಬದಲ್ಲಿ ಬೆಳೆದ ಪಾರ್ವತೆವ್ವ ಅವರು ಕೂಲಿ ಕೆಲಸ ಮಾಡುತ್ತಾ ಮಕ್ಕಳಿಗೆ ಶಿಕ್ಷಣ ಕಲಿಸಿದರು. ಬರಗಾಲದ ದಿನಗಳಲ್ಲಿ ಕಾಳು ಯೋಜನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದ ಅವರು, ಸಂಕಷ್ಟಗಳ ನಡುವೆಯೂ ಜಾನಪದ ಸೇವೆಯನ್ನು ಬಿಡಲಿಲ್ಲ. 1980ರ ದಶಕದಲ್ಲಿಯೇ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ತಮ್ಮ ಹಾಡುಗಳನ್ನು ಹಾಡಿ ಜನಮನ ಗೆದ್ದಿದ್ದಾರೆ.

ಇಂದಿನ ಯುವ ಪೀಳಿಗೆ ಡಬ್ಬಲ್ ಮೀನಿಂಗ್ ಹಾಡುಗಳನ್ನು ಜಾನಪದವೆಂದು ಭ್ರಮಿಸುತ್ತಿರುವ ಸಂದರ್ಭದಲ್ಲಿ, ಪಾರ್ವತೆವ್ವ ಅವರು ಅಪ್ಪಟ ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ತಮ್ಮ ಸುತ್ತಮುತ್ತಲಿನ ಗ್ರಾಮಗಳ ಯುವತಿಯರಿಗೆ ಸಂಪ್ರದಾಯಿಕ ಹಾಡುಗಳನ್ನು ಕಲಿಸುತ್ತ, ಮೂಲ ಜಾನಪದ ಪರಂಪರೆಯನ್ನು ಉಳಿಸುತ್ತಿದ್ದಾರೆ.

ಕಳೆದ ಐವತ್ತು ವರ್ಷಗಳಿಂದ ಜಾನಪದ ಗಾನವೇ ಅವರ ಬದುಕಾಗಿದೆ. ಮದುವೆ, ಸೀಮಂತ, ಗೌರಿ ಹಬ್ಬ, ಕೋಲಾಟ, ಸೋಬಾನೆ ಮುಂತಾದ ಸಂಪ್ರದಾಯಿಕ ಸಂದರ್ಭಗಳಲ್ಲಿ ಅವರು ಹಾಡಿದ ಹಾಡುಗಳು ಗ್ರಾಮೀಣ ಜೀವನದ ಭಾಗವಾಗಿವೆ. ಈವರೆಗೆ 600ಕ್ಕೂ ಹೆಚ್ಚು ಮದುವೆಗಳು ಮತ್ತು 450ಕ್ಕೂ ಹೆಚ್ಚು ಸೀಮಂತ ಕಾರ್ಯಕ್ರಮಗಳಲ್ಲಿ ಹಾಡಿ ಸಂಸ್ಕೃತಿ ಉಳಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

1990ರ ದಶಕದಲ್ಲಿ ಲಹರಿ ಕ್ಯಾಸೆಟ್ ಕಂಪನಿ ಅವರ ಹಾಡುಗಳನ್ನು ಧ್ವನಿಮುದ್ರಿಸಿ ಬಿಡುಗಡೆ ಮಾಡಿದ್ದು, “ಗಂಗವ್ವ-ಗೌರವ್ವ”, “ವರನೋಡಿ ಕನ್ಯಾಕೊಡು”, “ಮಲ್ಲಿಗೆ ಗೆಳತಿ” ಮುಂತಾದ ಧ್ವನಿಸುರುಳಿಗಳು ಅಪಾರ ಜನಪ್ರಿಯತೆ ಪಡೆದವು. ಕೇವಲ ನಾಲ್ಕು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಇಂದು ಅವರ ಹಾಡುಗಳು ಸಿ.ಡಿ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಲಭ್ಯವಿವೆ.

ವಿದೇಶಕ್ಕೂ ತಲುಪಿದ ಜಾನಪದ ಸಿರಿ :

1993ರಲ್ಲಿ ನೆದರ್ಲ್ಯಾಂಡಿನ ಸಂಶೋಧಕಿ ಇಂಗ್ಸ್ ಮೈಯಿಕೆಲ್ ಅವರು ಭಾರತೀಯ ಗರ್ಭಿಣಿಯರ ಆಹಾರ ಪದ್ಧತಿ ಕುರಿತಾಗಿ ಪಾರ್ವತೆವ್ವ ಅವರ ಹಾಡುಗಳನ್ನು ಸಂಗ್ರಹಿಸಿದರು. 2026ರ ಫೆಬ್ರವರಿಯಲ್ಲಿ ಅವರು ಮತ್ತೆ ಭೇಟಿ ನೀಡಿ ಪಾರ್ವತೆವ್ವ ಅವರ ಜಾನಪದ ಸಂಪತ್ತನ್ನು ಮೆಚ್ಚಿದರು.

ಪಾರ್ವತೆವ್ವ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ಜಾನಪದ ಅಕಾಡೆಮಿ ಗೌರವ (1999), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2011), ಮಣಿಪಾಲ ಜಾನಪದ ಕಣಜ ಪ್ರಶಸ್ತಿ (2012) ಸೇರಿದಂತೆ ಹಲವು ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ.

ಜಾನಪದವೇ ಜೀವನವೆಂದು ಬದುಕಿದ ಪಾರ್ವತೆವ್ವ—ಪದವಿ ಇಲ್ಲದಿದ್ದರೂ ಪಾಂಡಿತ್ಯದಿಂದ ಇದೀಗ ಪಿಎಚ್‌.ಡಿ ಗೌರವಕ್ಕೂ ಪಾತ್ರರಾಗಿದ್ದಾರೆ, ಮೂಲ ಜಾನಪದ ಸಾಹಿತ್ಯ, ಸಂಗೀತ, ಸಂಸ್ಕೃತಿ ಯ ಅಕ್ಷರ ದಾಸೋಹ ನೀಡಿದ ಪಾರ್ವತೆವ್ವ ನಿಗೆ ಇದೀಗ ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

ಜಾನಪದ ಕೇವಲ ಕಲೆಯಲ್ಲ, ಅದು ಜೀವನದ ಪಾಠ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿರುವ ಪಾರ್ವತೆವ್ವ ಹೊಂಗಲ್ ಅವರು, ಇಂದಿಗೂ ಹಳ್ಳಿಯ ಸರಳ ಜೀವನ ನಡೆಸುತ್ತ, ಜಾನಪದ ಸಂಸ್ಕೃತಿಯ ದೀಪವನ್ನು ಬೆಳಗಿಸುತ್ತಿದ್ದಾರೆ. ಅವರಂತಹವರು ಇದ್ದರೆ ಮಾತ್ರ ನಮ್ಮ ಪರಂಪರೆ ಮುಂದಿನ ಪೀಳಿಗೆಗೂ ಜೀವಂತವಾಗಿರುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande