
ಕೊಪ್ಪಳ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಕಾರ್ಯನಿರ್ವಜಿಸುತ್ತಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತಿನಿಂದ ಹಾಗೂ ಸಮಯ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸಬೇಕು. ಅಶಿಸ್ತು ಮುಂದುವರೆಸಿದರೆ ಶಿಸ್ತು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.
ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಬೇಕು ಎಂದು ಹೇಳುವ ಪರಿಸ್ಥಿತಿ ಬರಬಾರದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ನೀವೆಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ನಿಮಗೆ ಸಮಯ ಪ್ರಜ್ಞೆ ಇರಬೇಕು. ನೀವೇ ಕಚೇರಿಗೆ ಲೇಟಾಗಿ ಬಂದು ಸಿಬ್ಬಂದಿಗೆ ಇನ್ನೇನು ಪಾಠ ಹೇಳುತ್ತೀರಿ. ನಾನು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಎಂಬುದಾಗಿ ನಿಮಗೆ ನೀವೇ ಅರಿತು ಕಚೇರಿಗೆ ಸರಿಯಾದ ಸಮಯಕ್ಕೆ ಹಾಜರಾಗಿ ಕಚೇರಿಯ ಇನ್ನೀತರ ಸಿಬ್ಬಂದಿಗೆ ಉತ್ತಮ ಪರಿಪಾಠ ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ನೀವು ಯಾವ ಸಮಯಕ್ಕೆ ಕಚೇರಿಗೆ ಬಂದಿದ್ದೀರಿ? ನೀವು ಬಂದಾಗ ನಿಮ್ಮ ಸಿಬ್ಬಂದಿ ಕಚೇರಿಯಲ್ಲಿದ್ರಾ? ಎಂದು ಇಲಾಖಾವಾರು ಅಧಿಕಾರಿಗಳ ಹಾಜರಾತಿಯ ಬಗ್ಗೆ ಜಿಲ್ಲಾಧಿಕಾರಿಗಳು ಇದೆ ವೇಳೆ ಪರಿಶೀಲಿಸಿ, ಅಧಿಕಾರಿಗಳಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಶಿಸ್ತಿನ ಪಾಠ ಮಾಡಿದರು.
ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಾರಣದಿಂದಾಗಿ ಕಲ್ಯಾಣ ಕರ್ನಾಟಕ ಒಳಗೊಂಡಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಚೇರಿ ಕೆಲಸದ ಸಮಯವನ್ನು ಬೆಳಿಗ್ಗೆ 8 ರಿಂದ ಮಧ್ಯಹ್ನ 1.30 ರವರೆಗೆ ಬದಲಾವಣೆ ಮಾಡಿ ಸರ್ಕಾರವು ಆದೇಶಿಸಿದೆ. ಜಿಲ್ಲೆಯ ಕೆಲ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ; ಕಚೇರಿಯಲ್ಲಿ ಕಾಣುವುದಿಲ್ಲ ಎಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ಏಪ್ರೀಲ್ 21ರಂದು ಖುದ್ದು ಕೆಲ ಕಚೇರಿಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ಮಾಡಿಸಿದ್ದೇವೆ. 10 ಗಂಟೆಯಾದರು ಕೆಲ ಅಧಿಕಾರಿಗಳು ಕಾಣಿಸಿರುವುದಿಲ್ಲ. ಸಿಬ್ಬಂದಿಯು ಇರಲಿಲ್ಲ. ಇದು ನಾಚಿಕೆಗೇಡಿನ ಸಂಗತಿ. ನಿಮಗೆ ಅರಿವಿಲ್ಲವೇ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಾರಣ ಕೇಳಿ ನೋಟೀಸ್: ಅಧಿಕಾರಿಗಳ ತಂಡ ರಚಿಸಿ ಇನ್ಮುಂದೆ ವಾರಕ್ಕೊಮ್ಮೆ ಆಯಾ ಕಚೇರಿಗಳಿಗೆ ಆಕಸ್ಮಿಕ ಭೇಟಿ ಮಾಡಲಾಗುತ್ತದೆ. ಆ ವೇಳೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಕಾಣಿಸದಿದ್ದರೆ ಆಯಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಶಿಸ್ತುಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಮಾಡುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಕಚೇರಿಗೆ ವಿಳಂಬವಾಗಿ ಆಗಮಿಸುವುದನ್ನು ಮುಂದುವರೆಸಿದರೆ ಅಂತಹ ಅಧಿಕಾರಿಗಳಿಗೆ ಇನ್ಮುಂದೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಚಲನವಲನ ವಹಿ ಪಾಲನೆಗೆ ಸೂಚನೆ: ಕಚೇರಿಯಲ್ಲಿ ಚಲನವಲನ ವಹಿ ಇದ್ದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲಿದ್ದಾರೆ ಎಂಬುದು ತಿಳಿಯುತ್ತದೆ. ಹಾಗಾಗಿ ಇನ್ನುಂದೆ ಎಲ್ಲಾ ಇಲಾಖೆಗಳಲ್ಲಿ ಕಡ್ಡಾಯವಾಗಿ ಚಲನವಲನ ವಹಿಯನ್ನು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವೈದ್ಯರ ಮೇಲೆ ಸಾಕಷ್ಟು ದೂರು: ವೈದ್ಯಾಧಿಕಾರಿಗಳು ಮತ್ತು ವೈದ್ಯರ ಮೇಲೆ ಸಾಕಷ್ಟು ದೂರುಗಳು ಬರುತ್ತಿವೆ. ಇದು ಇಲ್ಲಿಗೆ ನಿಲ್ಲಬೇಕು. ಬರೀ ದೂರುಗಳನ್ನು ಕೇಳತ್ತ ಕೂಡುವುದೇ ನಮ್ಮ ಕೆಲಸವಲ್ಲ. ಯಾವುದೇ ದೂರುಗಳನ್ನು ಹಗುರವಾಗಿ ಪರಿಗಣಿಸದೇ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಈ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಏಪ್ರೀಲ್ 21ರಂದು ಬೆಳಗಿನ ಅವಧಿಯಲ್ಲಿ ಕೆಲ ಕಚೇರಿಗಳಿಗೆ ಭೇಟಿ ನೀಡಿದಾಗ ಕಚೇರಿ ಮುಂದಿನ ಕಾರಿಡಾರದಲ್ಲಿ ಅಶುಚಿತ್ವ ಕಾಣಿಸಿತು. ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸಿದ್ದು ಕಾಣಿಸಿತು. ಯಾವುದೇ ಪತ್ರವನ್ನು ಅಚ್ಚುಕಟ್ಟಾಗಿ ಸೂಚನಾ ಫಲಕದಲ್ಲಿ ಹಾಕಲು ತಿಳಿಸಿದ್ದರೂ ಎಲ್ಲೆಂದರಲ್ಲಿ ಹಾಕಿರುವುದು ಗಮನಕ್ಕೆ ಬಂದಿತು. ಈ ಅಶಿಸ್ತು ದೂರಾಗಬೇಕು. ಕಚೇರಿಯಲ್ಲಿ ಶಿಸ್ತು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ಮುಂದೆ ಪ್ರತಿ ತಿಂಗಳು ಕಚೇರಿಯಲ್ಲಿ ಶುಚಿತ್ವ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕರಾದ ಮಂಜುನಾಥ ಗುಂಡೂರು, ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅಜ್ಜಪ್ಪ ಸೋಗಲದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಟಿ.ಲಿಂಗರಾಜು, ಪಶು ಇಲಾಖೆ ಉಪನಿರ್ದೇಶಕರಾದ ಡಾ. ಪಿ.ಎಂ.ಮಲ್ಲಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್