
ನವದೆಹಲಿ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : 2023ರ ಬೆಂಗಳೂರು ಜೈಲು ಮೂಲಭೂತೀಕರಣ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯವು ಲಷ್ಕರ್-ಎ-ತೈಬಾ ಸಂಘಟನೆಯ ಸದಸ್ಯ ಟಿ. ನಾಸೀರ್ ಸೇರಿದಂತೆ ಏಳು ಮಂದಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ಎನ್ಐಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಟಿ. ನಾಸೀರ್ ಜೊತೆಗೆ ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮೊಹಮ್ಮದ್ ಫೈಸಲ್ ರಬ್ಬಾನಿ ಮತ್ತು ಸಲ್ಮಾನ್ ಖಾನ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಕಲಂಗಳಡಿ ತಲಾ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 48 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಒಳಗೆ ಟಿ. ನಾಸೀರ್ ಭಯೋತ್ಪಾದಕ ಸಂಘಟನೆಯ ಜಾಲ ನಿರ್ಮಿಸಿ, ಜೈಲಿನಲ್ಲಿದ್ದ ಯುವಕರನ್ನು ಗುರುತಿಸಿ ಅವರಿಗೆ ತರಬೇತಿ, ಮತಾಂತರ ಮತ್ತು ಮೂಲಭೂತವಾದದತ್ತ ಒಲವು ಬೆಳೆಸುವ ಕಾರ್ಯದಲ್ಲಿ ತೊಡಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಜೈಲಿನಲ್ಲಿದ್ದ ಯುವಕರನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಈ ಪ್ರಕರಣವನ್ನು ಮೊದಲು 2023ರ ಜುಲೈನಲ್ಲಿ ಬೆಂಗಳೂರು ಕೇಂದ್ರ ಅಪರಾಧ ಶಾಖೆ ದಾಖಲಿಸಿಕೊಂಡಿತ್ತು. ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.
ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಹಿಸಿಕೊಂಡು ತನಿಖೆ ನಡೆಸಿತು. ತನಿಖೆಯಲ್ಲಿ, ಟಿ. ನಾಸೀರ್ ನ್ಯಾಯಾಲಯಕ್ಕೆ ಹೋಗುವ ವೇಳೆ ತಪ್ಪಿಸಿಕೊಳ್ಳಲು ನೆರವಾಗುವ ರೀತಿಯಲ್ಲಿ ದೊಡ್ಡ ಮಟ್ಟದ ಸಂಚು ರೂಪಿಸಲಾಗಿತ್ತು ಎಂಬುದು ಬಹಿರಂಗಗೊಂಡಿತ್ತು.
ಟಿ. ನಾಸೀರ್ ಈ ಹಿಂದೆ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲೂ ವಿಚಾರಣಾಧೀನ ಕೈದಿಯಾಗಿದ್ದನು.
ಒಟ್ಟು 11 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ಅಹ್ಮದ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿ ಸಲ್ಮಾನ್ ಖಾನ್ನನ್ನು ರುವಾಂಡಾ ದೇಶದಿಂದ ಗಡೀಪಾರು ಮಾಡಿ ಭಾರತಕ್ಕೆ ಕರೆತರಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa