ಕೇರಳ ಪಟಾಕಿ ಘಟಕದಲ್ಲಿ ಭಾರಿ ಸ್ಫೋಟ : 13 ಮಂದಿ ಸಾವು, ಹಲವರ ಸ್ಥಿತಿ ಗಂಭೀರ
ತ್ರಿಶೂರ್, 21 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೇರಳದ ತ್ರಿಶೂರ್ ಜಿಲ್ಲೆಯ ಮುಂಡಾತ್ತಿಕೋಡ್ ಪ್ರದೇಶದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಾಹ್ನ ಸುಮಾರು 3:30ರ ವೇಳ
FIRECRAKE


ತ್ರಿಶೂರ್, 21 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೇರಳದ ತ್ರಿಶೂರ್ ಜಿಲ್ಲೆಯ ಮುಂಡಾತ್ತಿಕೋಡ್ ಪ್ರದೇಶದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಧ್ಯಾಹ್ನ ಸುಮಾರು 3:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ತ್ರಿಶೂರ್ ಪೂರಂ ಉತ್ಸವಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಸುಮಾರು 40 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಫೋಟದ ತೀವ್ರತೆಗೆ ಅನೇಕ ಕಾರ್ಮಿಕರು ಬೆಂಕಿಗೆ ಆಹುತಿಯಾಗಿದ್ದು, ಹಲವರು ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಗಾಯಾಳುಗಳನ್ನು ತಕ್ಷಣವೇ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸೇರಿದಂತೆ ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ ಗಾಯಾಳುಗಳಿಗೆ ವಿಶೇಷ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತ್ರಿಶೂರ್ ವೈದ್ಯಕೀಯ ಕಾಲೇಜು ಹಾಗೂ ಜನರಲ್ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಸಜ್ಜುಗೊಳಿಸಲು ಸೂಚಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದ ಶಬ್ದ ಹಲವಾರು ಕಿಲೋಮೀಟರ್ ದೂರದವರೆಗೂ ಕೇಳಿಬಂದಿದ್ದು, ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳದ ಸುತ್ತಮುತ್ತ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯಲ್ಲಿಯೂ ಸಣ್ಣ ಪ್ರಮಾಣದ ಸ್ಫೋಟಗಳು ಮುಂದುವರಿದ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ತೊಂದರೆ ಉಂಟಾಯಿತು. ಸ್ಥಳದಲ್ಲಿ ಇನ್ನೂ ಸ್ಫೋಟಗೊಳ್ಳದ ಪಟಾಕಿಗಳು ಚದುರಿಕೊಂಡಿರುವುದರಿಂದ ಮತ್ತಷ್ಟು ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಪ್ರಕಾರ, ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದ್ದರಿಂದ ಸುಮಾರು 40 ಮಂದಿ ಘಟಕದಲ್ಲಿದ್ದಿರಬಹುದೆಂದು ಅಂದಾಜಿಸಲಾಗಿದೆ. ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಇತರ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ತ್ರಿಶೂರಿನ ಎಲ್ಲಾ ಆಸ್ಪತ್ರೆಗಳನ್ನು ಹೈ ಅಲರ್ಟ್ನಲ್ಲಿ ಇರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಪಟಾಕಿಗಳನ್ನು ಸಂಗ್ರಹಿಸಿ ತಯಾರಿಸುತ್ತಿದ್ದ ತಾತ್ಕಾಲಿಕ ಶೆಡ್ನಲ್ಲೇ ಸ್ಫೋಟ ಸಂಭವಿಸಿದೆ. ಸ್ಫೋಟದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಸುರಕ್ಷತಾ ನಿಯಮ ಉಲ್ಲಂಘನೆ ಅಥವಾ ಶೇಖರಣಾ ದೋಷ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಘಟನೆಯ ಕುರಿತು ಸಮಗ್ರ ತನಿಖೆ ಆರಂಭಿಸಿದ್ದು, ಘಟಕದ ಭದ್ರತಾ ವ್ಯವಸ್ಥೆ ಹಾಗೂ ಪರವಾನಗಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಹೃದಯ ವಿದ್ರಾವಕ ಘಟನೆ ರಾಜ್ಯಾದ್ಯಂತ ಆಘಾತ ಉಂಟುಮಾಡಿದ್ದು, ಕೇರಳದ ಪ್ರಮುಖ ದೇವಾಲಯ ಉತ್ಸವಗಳಲ್ಲಿ ಒಂದಾದ ತ್ರಿಶೂರ್ ಪೂರಂ ಆಚರಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande