
ಕೋಲಾರ ಏಪ್ರಿಲ್ ೨೧ (ಹಿ.ಸ) :
ಆ್ಯಂಕರ್ : ಸರ್ಕಾರಿ ನೌಕರರು ಸಮಾಜದ ಬೆನ್ನೆಲುಬು. ಜನರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸುವ ಯೋಜನೆಗಳನ್ನು ಮನೆಮನೆಗೂ ತಲುಪಿಸುತ್ತಾರೆ. ಶಿಕ್ಷಣ, ಆರೋಗ್ಯ, ಕೃಷಿ, ಸಾರಿಗೆ, ನ್ಯಾಯ, ಗ್ರಾಮೀಣಾಭಿವೃದ್ಧಿ ಮತ್ತು ಅನೇಕ ಕ್ಷೇತ್ರಗಳಲ್ಲಿ ತಮ್ಮ ಶ್ರಮವನ್ನು ಅರ್ಪಿಸುತ್ತಾ, ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವವರನ್ನು ಗುರ್ತಿಸಿ ಗೌರವಿಸುವ ಕೆಲಸ ಪ್ರತಿ ಹಂತದಲ್ಲೂ ಆಗಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಅಜಯ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಎಸ್ಸಿ/ಎಸ್ಸಿ ಸಮನ್ವಯ ಸಮಿತಿ ಏರ್ಪಡಿಸಿದ್ದ ಸರ್ಕಾರಿ ನೌಕರರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ನೌಕರರ ದಿನಾಚರಣೆ ಇದು ಕೇವಲ ಒಂದು ಆಚರಣೆ ಮಾತ್ರವಲ್ಲ ನಮ್ಮ ರಾಜ್ಯದ ಅಭಿವೃದ್ಧಿ ಆಡಳಿತ ಮತ್ತು ಜನಸೇವೆಯಲ್ಲಿ ಮಹತ್ವದ ಪಾತ್ರ ವಹಿಸುವ ಸರ್ಕಾರಿ ಸೇವೆಯನ್ನು ಅಭಿನಂದಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಪ್ರತಿದಿನವೂ ಕೆಲವು ಸವಾಲುಗಳನ್ನು ಎದುರಿಸುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಪ್ರಾಮಾಣಿಕತೆ ಕರ್ತವ್ಯ ನಿಷ್ಠೆ ಮತ್ತು ಶಿಸ್ತಿನಿಂದ ಸೇವೆ ಸಲ್ಲಿಸುವ ಎಲ್ಲ ನೌಕರರು ಅಭಿನಂದನಾರ್ಹರು. ಅವರ ಪರಿಶ್ರಮದಿಂದಲೇ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಇಂದಿನ ಯುಗದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಯೊಂದಿಗೆ ಸರ್ಕಾರಿ ಸೇವೆಯಲ್ಲಿಯೂ ಪರದರ್ಶಕತೆ, ವೇಗ ಮತ್ತು ಜನಸ್ನೇಹಿ ಕಾರ್ಯ ವೈಖರಿಗೆ ಈ ಬದಲಾವಣೆಗೆ ಹೊಂದುಕೊAಡು ಜನ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುತ್ತಿರುವ ಎಲ್ಲಾ ನೌಕರರನ್ನು ನಾವು ಅಭಿನಂದಿಸಲೇಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಎಸ್ಸಿ/ಎಸ್ಸಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಶ್ವಿನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನಿತರಾದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಜನರ ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡಲು ಸದಾ ಸಿದ್ಧರಾಗಿರುವ ಸರ್ಕಾರಿ ನೌಕರರು ಸಮಾಜದ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತಾರೆ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರುವವರು ನಿಜಕ್ಕೂ ಅಭಿನಂದನಾರ್ಹರು ಎಂದು ಬಣ್ಣಿಸಿದರು.
ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಮುನಿರಾಜು ಮಾತನಾಡಿ ಸರ್ಕಾರಿ ನೌಕರರ ಸೇವೆಯನ್ನು ಸ್ಮರಿಸುವುದರ ಜೊತೆಗೆ ಇನ್ನಷ್ಟು ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮತ್ತು ಜನಪರ ಮನೋಭಾವದಿಂದ ಕೆಲಸ ಮಾಡುವ ಸಂಕಲ್ಪ ಸ್ವೀಕರಿಸಬೇಕಾಗಿದೆ ಈ ನಿಟ್ಟಿನಲ್ಲಿ ರಾಜ್ಯದ ಪ್ರಗತಿಗೆ ಶ್ರಮಿಸುವ ಜವಾಬ್ದಾರಿ ನಮ್ಮಗಳ ಮೇಲೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮುಖಂಡರುಗಳಾದ ಲೋಕೇಶ್ ಕೃಷ್ಣಪ್ಪ, ರಂಜಿತ್ ನಂದೀಶ್ ವೆಂಕಟೇಶ್ ರಾಜಪ್ಪ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್