
ಗದಗ, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಸಾಮಾಜಿಕ ಸಮಾನತೆ, ಸಾಮಾಜಿಕ ಪ್ರಾತಿನಿಧ್ಯ, ಸಾಮಾಜಿಕ ಕಾಳಜಿಗಾಗಿ ರಾಜಕೀಯ ಮಾಡದೆ ಶ್ರಮಿಸಿದ ಪಕ್ಷ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಅಶೋಕ ಮಂದಾಲಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ದೇಶದಲ್ಲೇ ಮೊದಲ ಬಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ರಾಜಕೀಯ ಮೀಸಲಾತಿ ನೀಡುವ ಮೂಲಕ ಸಧ್ಯ ದೇಶಾದ್ಯಂತ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಸುಮಾರು 15 ಲಕ್ಷ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕಿದೆ.
17 ಏಪ್ರಿಲ್ 2026ರಂದು ಲೋಕಸಭೆಯ ವಿಶೇಷ ಅಧಿವೇಶದಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸಾಗಲು 352 ಮತಗಳು ಅವಶ್ಯಕತೆಯಿದ್ದು ಆದರೆ ಪರವಾಗಿ 298 ಮತ್ತು ವಿರುದ್ದವಾಗಿ 230 ಮತಗಳು ಪಡೆದಿದ್ದು 54 ಮತಗಳ ಅಂತರದಿಂದ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರವಾಗಿಲ್ಲ.
ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿ ಎಂದು ಬಿಜೆಪಿ ಬಿಂಬಿಸುತ್ತಿದೆ ಆದರೆ, 2023ರಲ್ಲಿ ಲೋಕಸಭೆ ಮತ್ತು ವಿಧಾನ ಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ನೀಡುವ ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಸಂಸದರು ಸೇರಿ 454 ಪರ ಮತಗಳಿಂದ ಅಂಗಿಕಸಿಲಾಗಿತ್ತು ಆದರೆ ಜಾರಿಗೆ ತರಲು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಆಗಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿತ್ತು.
ರಾಜ್ಯಸಭೆಯಲ್ಲಿ ಮಸೂದೆಯು ಅವಿರೋಧವಾಗಿ (214-0) ಅಂಗೀಕಾರವಾಯಿತು. ಅಂದರೆ ಕಾಂಗ್ರೆಸ್ನ ಪ್ರತಿಯೊಬ್ಬ ಸದಸ್ಯರೂ ಮಸೂದೆಯನ್ನು ಬೆಂಬಲಿಸಿದ್ದರು. ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಾಗಿದ್ದರೆ 2023ರಲ್ಲಿ ಈ ಮಸೂದೆ ಪಾಸಾಗುತ್ತಲೇ ಇರಲಿಲ್ಲ. ಬಿಜೆಪಿಯ ಈ ಆರೋಪ ಕೇವಲ ರಾಜಕೀಯ ಪ್ರೇರಿತವಾಗಿದೆ ಎಂದು ಅಶೋಕ ಮಂದಾಲಿ ತಿಳಿಸಿದ್ದಾರೆ.
2023ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಅಂಗಿಕಾರವಾಗಿದೆ ಈಗಿರುವ 543 ಲೋಕಸಭಾ ಸೀಟುಗಳಲ್ಲೇ ಮಹಿಳೆಯರಿಗೆ 181 ಸೀಟುಗಳನ್ನು ನೀಡಲು ಯಾವುದೇ ತಾಂತ್ರಿಕ ಅಡೆತಡೆ ಇಲ್ಲ. ಆದರೆ, ಬಿಜೆಪಿ ಇದನ್ನು 2029 ಅಥವಾ 2034ಕ್ಕೆ ಮುಂದೂಡುತ್ತಿದೆ. ಇದು ಮಹಿಳೆಯರಿಗೆ ನೀಡಿದ ಖಾಲಿ ಭರವಸೆ ಮಾತ್ರ. ಬಿಜೆಪಿ 2014 ಮತ್ತು 2019ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಆದರೂ 9 ವರ್ಷಗಳ ಕಾಲ ಮಸೂದೆಯನ್ನು ಮುಟ್ಟಲೇ ಇಲ್ಲ. ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ 2014ರಲ್ಲೇ ಇದನ್ನು ಜಾರಿಗೆ ತರಬಹುದಿತ್ತು. ಆದರೆ, 2024ರ ಚುನಾವಣೆ ಹತ್ತಿರ ಬಂದಾಗ ಮಾತ್ರ 'ನಾರಿ ಶಕ್ತಿ'ಯ ನೆನಪಾಗಿದೆ. ಇದು ಕೇವಲ ರಾಜಕೀಯ ಗಿಮಿಕ್ ಅಷ್ಟೇ.
ಕಾಂಗ್ರೆಸ್ ತಂದಿದ್ದ 2010ರ ಮಸೂದೆಯಲ್ಲಿ ಇಂತಹ ಯಾವುದೇ ವಿಳಂಬದ ಷರತ್ತುಗಳಿರಲಿಲ್ಲ. ಬಿಜೆಪಿಯ ಈ ಷರತ್ತಿನಿಂದಾಗಿ 2024 ಮತ್ತು 2026ರ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗುತ್ತಿಲ್ಲ.ಸಬ್ ಕಾ ಸಾಥ್ ಎನ್ನುವ ಘೋಷಣೆ ಮೂಲಕ ಓಬಿಸಿ ವರ್ಗದ ಮತಗಳನ್ನು ಕೇಳುವ ಬಿಜೆಪಿ, ಅಧಿಕಾರ ಹಂಚಿಕೆಯ ವಿಷಯ ಬಂದಾಗ ಓಬಿಸಿ ಮಹಿಳೆಯರನ್ನು ಕತ್ತಲಲ್ಲಿಟ್ಟಿದೆ ಎಂದು ಆರೋಪಿಸಿದ್ದಾರೆ.
2014ರಿಂದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಲವಾರು ಯೋಜನೆ ಹಾಗೂ ಮಸೂದೆಗಳನ್ನು ಮರುನಾಮಕರಣ ಅಥವಾ ತಿದ್ದುಪಡಿ ಮಾಡಿ ತಾವೇ ಜಾರಿಮಾಡಿದ ರೀತಿ ಬಿಜೆಪಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಈಗ 2029ರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ತಂದಿದ್ದು ತಾವೇ ಎಂದು ಬಿಂಬಿಸಿಕೊಳ್ಳಲು ಪ್ರಯತ್ನ ಮಾಡಿ 2029 ಲೋಸಭಾ ಚುನಾವಣಾ ಗೆಲುವಿಗೆ ತಂತ್ರ ಹೂಡಿದೆ. ಹಾಗಾದರೆ 2014, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದರೂ ಸಹ ಯಾಕೆ ಭರವಸೆಯನ್ನು ಈಡೇರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
2024ರ ಲೋಕಸಭಾ ಚುನಾವಣೆ ಗೆಲುವಿಗೋಸ್ಕರ ಸೆಪ್ಟೆಂಬರ್ 2023ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ನಾರಿ ಶಕ್ತಿ ವಂದನ ಅಧಿನಿಯಮ-2023 ಮಸೂದೆಯನ್ನು ಅಂಗೀಕರಿಸಿ 2027ರ ಸಿದ್ಧವಾಗುವ ಜನಗಣತಿ ಆಧಾರದ ಮೇಲೆ ಮಹಿಳಾ ಮೀಸಲಾತಿ ನೀಡುವುದಾಗಿ ಹೇಳಿ ಸುಮ್ಮನಾಗಿತ್ತು.
ಈ ಮಸೂದೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳ ಮೀಸಲಾತಿ ಕಲ್ಪಿಸಿಲ್ಲ. ಇದು ಸಮಾಜದ ಬಹುದೊಡ್ಡ ವರ್ಗದ ಮಹಿಳೆಯರನ್ನು ಅಧಿಕಾರದಿಂದ ವಂಚಿಸುವ ಕ್ರಮವಾಗಿದೆ.
2027ರ ವೇಳೆಗೆ ಜನಗಣತಿ ಫಲಿತಾಂಶಗಳು ಲಭ್ಯವಾಗಲಿವೆ ಎಂದು ಸೆನ್ಸಸ್ ರಿಜಿಸ್ಟ್ರಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಆದರೆ ಈಗ 2011ರ ಜನಗಣತಿ ಆಧಾರದಲ್ಲೇ ಮೀಸಲಾತಿ ನೀಡುವ ನಿರ್ಧಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದ್ದು ಇದರ ಹಿಂದಿರುವ ಮರ್ಮವೇನು?
ಈಗ 2011ರ ಜನಗಣತಿ ಪರಿಗಣಿಸುವುದಾದರೆ 2023ರಲ್ಲಿ ಮಸೂದೆ ಅಂಗೀಕಾರದ ಆದ ಕೂಡಲೇ ಯಾಕೆ 2011ರ ಜನಗಣತಿಯನ್ನು ಪರಿಗಣಿಸಿಲ್ಲ? 11 ಪ್ರಸ್ತುತ 543 ಲೋಕಸಭೆ ಸ್ಥಾನಗಳಲ್ಲಿ 74 ಮಹಿಳಾ ಸದಸ್ಯರು ಚುನಾಯಿತರಾಗಿದ್ದು 13.6 ಕ್ಕಿಂತ ಕಡಿಮೆ ಇದ್ದಾರೆ. ಬಿಜೆಪಿ 31. ಕಾಂಗ್ರೆಸ್ 13 ಮತ್ತು ತೃಣಮೂಲ ಕಾಂಗ್ರೆಸ್ ಮಹಿಳೆಯರು ಆಯ್ಕೆಯಾಗಿದ್ದರೆ.
ಕ್ಷೇತ್ರ ಮರುವಿಂಗಡಣೆಯಿಂದ 543 ಲೋಕಸಭೆ ಸ್ಥಾನಗಳು 816ಕ್ಕೆ ಹೆಚ್ಚಳವಾದರೆ ಮಹಿಳೆಯರಿಗೆ 273 ಸ್ಥಾನಗಳು ಮೀಸಲಿಡಲಾಗುತ್ತದೆ ಹಾಗೂ ರಾಜ್ಯಸಭೆಯಲ್ಲಿ ಸುಮಾರು 42 ಮಹಿಳಾ ಸದಸ್ಯರಿದ್ದು ಮಹಿಳಾ ಪ್ರಾತಿನಿಧ್ಯವು ಶೇ. 14ರಷ್ಟಿದೆ.
ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 116 ಮಹಿಳಾ ಸಂಸದರಿದ್ದು ರಾಜ್ಯಗಳ ಅಸೆಂಬ್ಲಿಗಳು ಶೇ. 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿವೆ. ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಗಳಲ್ಲಿ ಮಹಿಳಾ ಮತದಾರರ ಮತದಾನವು ಬಿಹಾರ - ಶೇ. 12, ಅಸ್ಸಾಂ -ಶೇ. 4.49, ಕೇರಳ - ಶೇ. 7.25 ಹಾಗೂ ಪಾಂಡಿಚೇರಿ - ಶೇ. 9.2ರಷ್ಟು ಹೆಚ್ಚಾಗಿದ್ದು ನಾರಿ ಶಕ್ತಿ ವಂದನ ಅಧಿನಿಯಮ-2023 ಮಸೂದೆಯನ್ನು ಜಾರಿ ಮಾಡಿ 2029ರ ಚುನಾವಣೆಯಲ್ಲಿ ಮಹಿಳಾ ಮತದಾರರ ಮತವನ್ನು ಸೆಳೆಯಲು ಕೇಂದ್ರ ಬಿಜೆಪಿ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1987ರಲ್ಲಿ ಮಹಿಳೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವರಾಗಿದ್ದ ಮಾರ್ಗರೆಟ್ ಆಳ್ವ ನೇತೃತ್ವದಲ್ಲಿ ಭಾರತೀಯ ಮಹಿಳೆಯರನ್ನು ಸಾಮಾಜಿಕ ದಬ್ಬಾಳಿಕೆಯ ಹಿಡಿತದಿಂದ ಮುಕ್ತಗೊಳಿಸಲು ರಚಿಸಲಾದ 14 ಸದಸ್ಯರ ಸಮಿತಿಯು ಅಧ್ಯಯನ ನಡೆಸಿ 'ಮಹಿಳೆಯರ ರಾಷ್ಟ್ರೀಯ ದೃಷ್ಟಿಕೋನ ಯೋಜನೆ 1988-2000 ಎಂಬ ವರದಿಯನ್ನು ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀ ರಾಜೀವ್ ಗಾಂಧಿ ಅವರಿಗೆ ಸಲ್ಲಿಸಿತು. ಈ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆ, ಮಹಿಳೆಯರಿಗೆ ಆಸ್ತಿ ಹಕ್ಕುಗಳು, ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೇರಿದಂತೆ 353 ಮಹಿಳಾ ಕಲ್ಯಾಣಕ್ಕೆ ಬೇಕಾದ ಶಿಫಾರಸುಗಳನ್ನು ಸಮಿತಿಯು ಮಾಡಿತ್ತು.
1989ರಲ್ಲಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿಯವರು ದೇಶದಲ್ಲೇ ಮೊದಲ ಬಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ. 1993ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸ್ಥಾನಗಳಲ್ಲಿ ಶೇ. 33ರಷ್ಟನ್ನು ಮಹಿಳೆಯರಿಗೆ ಮೀಸಲಾತಿ ನೀಡುವ ಐತಿಹಾಸಿಕ ಮಸೂದೆ ಅನುಮೋದನೆಗೊಂಡು ಅನುಷ್ಠಾನಗೊಂಡಿತ್ತು. ನಂತರ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ 1998ರಿಂದ 2003ರ ನಡುವೆ ಮತ್ತೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ನಾಲ್ಕು ಬಾರಿ ಸಂಸತ್ತಿನಲ್ಲಿ ಮಂಡಿಸಿತ್ತು ಆದರೆ, ಅಂಗೀಕಾರವಾಗಿರಲಿಲ್ಲ. 2010ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ, ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಸಂವಿಧಾನದ 108 ನೇ ತಿದ್ದುಪಡಿ ಮಸೂದೆಯಾಗಿ ಅಂಗೀಕರಿಸಿತು. 2014, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ ಬಿಜೆಪಿ 9 ವರ್ಷದ ಬಳಿಕ 2023ರ ಆಗಸ್ಟ್ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಎರಡೂ ಸದನಗಳಲ್ಲಿ ನಾರಿ ಶಕ್ತಿ ವಂದನಾ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದಿತ್ತು.
1950: ಸಂವಿಧಾನದ ಮೂಲಕ ಸಮಾನತೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಸಂವಿಧಾನದ ವಿಧಿ 14 ಮತ್ತು 15ರ ಅಡಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಲಿಂಗ ತಾರತಮ್ಯದ ವಿರುದ್ಧ ರಕ್ಷಣೆ ನೀಡಲಾಯಿತು.
1955-56: ಹಿಂದೂ ವಿವಾಹ ಮತ್ತು ಉತ್ತರಾಧಿಕಾರ ಕಾಯ್ದೆ - ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು ಮತ್ತು ವಿಚ್ಚೇದನದಂತಹ ಕಾನೂನುಬದ್ಧಗೊಳಿಸಲಾಯಿತು. ಸಾಮಾಜಿಕ ಹಕ್ಕುಗಳನ್ನು ಮೊದಲ ಬಾರಿಗೆ
1961: ವರದಕ್ಷಿಣೆ ನಿಷೇಧ ಕಾಯ್ದೆ - ಮಹಿಳೆಯರ ಮೇಲಿನ ಸಾಮಾಜಿಕ ಪಿಡುಗನ್ನು ತಡೆಯಲು ನೆಹರೂ ಸರ್ಕಾರವು ಈ ಕಠಿಣ ಕಾನೂನನ್ನು ಜಾರಿಗೆ ತಂದಿತು.
1992-93: 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿ - ರಾಜೀವ್ ಗಾಂಧಿಯವರ ಕನಸಿನಂತೆ ಪಿ.ವಿ. ನರಸಿಂಹರಾವ್ ಸರ್ಕಾರವು ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿತು. ಇದು ಭಾರತದ ಇತಿಹಾಸದಲ್ಲಿ ಲಕ್ಷಾಂತರ ಮಹಿಳೆಯರು ರಾಜಕೀಯಕ್ಕೆ ಬರಲು ದಾರಿ ಮಾಡಿಕೊಟ್ಟಿತು.
1992: ರಾಷ್ಟ್ರೀಯ ಮಹಿಳಾ ಆಯೋಗದ ಸ್ಥಾಪನೆ - ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯನ್ನು ರಚಿಸಲಾಯಿತು.
2005: ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ - ಮನೆಯೊಳಗೆ ಮಹಿಳೆಯರಿಗೆ ರಕ್ಷಣೆ ನೀಡುವ ಐತಿಹಾಸಿಕ ಕಾನೂನನ್ನು ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದಿತು.
2005: ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ - ತಂದೆಯ ಆಸ್ತಿಯಲ್ಲಿ ಪುತ್ರಿಯರಿಗೂ ಸಮಾನ ಹಕ್ಕು ನೀಡುವ ಮೂಲಕ ಆರ್ಥಿಕ ಸಮಾನತೆ ತರಲಾಯಿತು.
2006: ನರೇಗಾ ಮತ್ತು ಸಮಾನ ವೇತನ - ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಖಾತ್ರಿ ನೀಡುವುದಲ್ಲದೆ, ಪುರುಷರಿಗೆ ಸಮಾನವಾಗಿ ವೇತನ ಪಡೆಯುವುದನ್ನು ಖಚಿತಪಡಿಸಲಾಯಿತು.
2010: ಮಹಿಳಾ ಮೀಸಲಾತಿ ಮಸೂದೆ ಸರ್ಕಾರವು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ ನೀಡುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿತು.
2013: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ, ಉದ್ಯೋಗಸ್ಥ ಮಹಿಳೆಯರ ಸುರಕ್ಷತೆಗಾಗಿ ಈ ಪ್ರಮುಖ ಕಾನೂನನ್ನು ತರಲಾಯಿತು.
2013: ನಿರ್ಭಯಾ ನಿಧಿ - ಮಹಿಳೆಯರ ಸುರಕ್ಷತೆಗಾಗಿ ದೇಶಾದ್ಯಂತ ವಿಶೇಷ ನಿಧಿಯನ್ನು ಸ್ಥಾಪಿಸಲಾಯಿತು.
ಶಕ್ತಿ ಯೋಜನೆ (2023): ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಮೂಲಕ ಅವರ ಚಲನಶೀಲತೆ ಮತ್ತು ಆರ್ಥಿಕ ಉಳಿತಾಯಕ್ಕೆ ನೆರವಾಗಿದ್ದು 544 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ (2023): ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ
ಮೂಲಕ ದೇಶದ ಅತಿದೊಡ್ಡ ನೇರ ನಗದು ವರ್ಗಾವಣೆ ಯೋಜನೆಯನ್ನು ಜಾರಿಗೊಳಿಸಿ 1.24 ಕೋಟಿ ಗೃಹಿಣಿಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಲಾಗಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಅಶೋಕ ಮಂದಾಲಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP