ಸಮಾಜೋಧಾರ್ಮಿಕ ಚಳುವಳಿಯ ಹರಿಕಾರರು ಬಸವಣ್ಣನವರು
ಗದಗ, 21 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಸಮಾನತೆಯಿಂದ ಕೂಡಿದ್ದ ಸಮಾಜದಲ್ಲಿಯ ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸಿ ಸಮಸಮಾಜವನ್ನು ಕಟ್ಟಿದವರು ಬಸವೇಶ್ವರರು. ಸಮಾಜೋಧಾರ್ಮಿಕ ಚಳುವಳಿಯ ಹರಿಕಾರರು ಬಸವಣ್ಣನವರು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. ಲಿಂಗಾಯತ ಪ್ರಗ
ಫೋಟೋ


ಗದಗ, 21 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಸಮಾನತೆಯಿಂದ ಕೂಡಿದ್ದ ಸಮಾಜದಲ್ಲಿಯ ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸಿ ಸಮಸಮಾಜವನ್ನು ಕಟ್ಟಿದವರು ಬಸವೇಶ್ವರರು. ಸಮಾಜೋಧಾರ್ಮಿಕ ಚಳುವಳಿಯ ಹರಿಕಾರರು ಬಸವಣ್ಣನವರು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ ಬಸವ ಜಯಂತಿ ಹಾಗೂ 2794 ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಗತ್ತಿನ ಮೊದಲ ಪ್ರಜಾಪ್ರಭುತ್ವ ನಿರ್ಮಾತೃ ಬಸವಣ್ಣನವರು. ಬಸವೇಶ್ವರರು ಮಾನವ ಸಂಸ್ಕೃತಿಗೆ ಕಳಂಕ ತರುವ ಜಾತಿ, ವರ್ಗ, ಲಿಂಗಗಳ ಅಸಮಾನತೆಯನ್ನು ತೊಲಗಿಸಿ ಕಾಯಕ, ದಾಸೋಹದ ಮೂಲಕ ಸಮಾಜೋಧಾರ್ಮಿಕ ಚಳುವಳಿಯನ್ನು ಹುಟ್ಟು ಹಾಕಿ ಮಾನವತೆಯ ಅಡಿಯಲ್ಲಿ ಎಲ್ಲರೂ ಒಂದೇ ಎಂಬ ಸಮಾನತೆಯ ಸಂದೇಶವನ್ನು ಸಾರಿದರು. ವಿಶ್ವದೆಲ್ಲೆಡೆ ರಾಜಪ್ರಭುತ್ವಗಳು ಆಳ್ವಿಕೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿ ಶ್ರೀಸಾಮಾನ್ಯನು ಚರ್ಚೆಯಲ್ಲಿ ಪಾಲ್ಗೊಳ್ಳುವಂತಹ `ಅನುಭವ ಮಂಟಪ'ವೆಂಬ ಸಂಸತ್ತನ್ನು ಕಟ್ಟಿದ ವಿಶ್ವದ ಮೊದಲ ದಾರ್ಶನಿಕರು ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಬಳ್ಳಾರಿಯ ಶ್ರೀ ನಿಷ್ಠಿ ರುದ್ರಪ್ಪ ಅವರು `ಕರ್ನಾಟಕದ ಸಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರು' ಎಂಬ ವಿಷಯದ ಕುರಿತು ಮಾತನಾಡುತ್ತ, ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರು ನುಡಿದಂತೆ ನಡೆದವರು. 12 ನೇ ಶತಮಾನದಲ್ಲಿ ಶೋಷಿತರ ಧ್ವನಿಯಾದವರು. ಅನೇಕ ಮೌಢ್ಯ ಆಚರಣೆಳನ್ನು ಅಳಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಮೌಲಿಕ ಸಂದೇಶಗಳನ್ನು ನೀಡಿದ್ದಾರೆ. ಪ್ರಸ್ತುತ ಈ ವಿಶ್ವಕ್ಕೆ ಬಸವಣ್ಣನವರ ತತ್ತ್ವಸಂದೇಶಗಳು ಬಹಳ ಅವಶ್ಯ ಎಂದು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್. ವಿ. ಸಂಕನೂರ ಅವರು ವಿಶ್ವಗುರು ಬಸವೇಶ್ವರರು ಅಂದು ಜಾತಿರಹಿತ ಸಮಾಜವನ್ನು ಕಟ್ಟಬೇಕೆಂಬ ಅವರ ಆಶಯ ಇಂದಿಗೂ ಸಂಪೂರ್ಣವಾಗಿ ಯಶಸ್ವಿಯಾಗದಿರುವುದು ವಿಷಾಧನೆಯ ಎಂದರು. ಬಸವೇಶ್ವರರು ಮೂಡನಂಬಿಕೆಗಳನ್ನು ಪ್ರಬಲವಾಗಿ ಅಲ್ಲಗಳೆದು ವೈಜ್ಞಾನಿಕ, ವೈಚಾರಿಕ ಹಿನ್ನೆಲೆಯಲ್ಲಿ ಸಮಾಜವನ್ನು ಕಟ್ಟಿದ ಸಮಾಜ ಚಿಂತಕರು ಎಂದರು.

ತೋಂಟದ ಸಿದ್ಧಲಿಂಗ ವಚನ ಪಾಠಶಾಲೆಯ ಅಡಿಯಲ್ಲಿ ಜರುಗಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಿ ಬಹುಮಾನಗಳ ಪ್ರಯೋಜಕತ್ವವನ್ನು ವಹಿಸಿಕೊಂಡಿದ್ದ ಮಾಜಿ ಸಚಿವರಾದ ಎಸ್ ಎಸ್ ಪಾಟೀಲ್ ಅವರು ಬಸವೇಶ್ವರರ ತತ್ವ ಚಿಂತನೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿಗೆ ಅರ್ಥ ಬರುತ್ತದೆ ಎಂದರು.

ಪ್ರೋ. ಶಕುಂತಲಾ ಸಿಂಧೂರ ಬರೆದ ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು ಹಾಗೂ ಡಾ. ವೀರಣ್ಣ ರಾಜೂರ ಅವರು ಬರೆದ ಹಾಲಬಾವಿ ವೀರಭದ್ರಪ್ಪನವರು ಎಂಬ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.

ವೀರೇಶ ಬುಳ್ಳಾ ಅವರು ಧರ್ಮ ಗ್ರಂಥ ಪಠಣ, ಶ್ರೀಮತಿ ತೇಜಸ್ವಿನಿ ರಾಜಶೇಖರ ತೋಟದ ಅವರು ವಚನ ಚಿಂತನ ನೆರವೇರಿಸಿದರು.

ವಚನ ಸಂಗೀತವನ್ನು ಮಲ್ಲಿಕಾರ್ಜುನ ನೇಗಿನಹಾಳ ಹಾಗೂ ಶ್ರೀಮತಿ ಅಕ್ಷತಾ ಹಿರೇಮಠ ಅವರಿಂದ ಜರುಗಿತು.

ರಾಜೇಶ್ವರಿ ಕಲಾ ಕುಟೀರ, ನಿತ್ಯಂ ಯೋಗ ಕೇಂದ್ರ ಹಾಗೂ ಭಕ್ತಿ ಹಾತಲಗಿ ಹಾಗೂ ಸಂಗಡಿಗರಿಂದ ವಚನ ನೃತ್ಯಗಳ ವಚನ ವೈಭವ ಕಾರ್ಯಕ್ರಮ ಜರುಗಿತು.

ದಾಸೋಹ ಸೇವೆಯನ್ನು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಕಡ್ಲಿಕೊಪ್ಪ ಹಾಗೂ ಮಠದ ಭಕ್ತರಾದ ಕೊಟ್ಟೂರೇಶ್ವರ ಕೋರಿ ಕುಟುಂಬ ವರ್ಗದವರು ಕೈಗೊಂಡರು.

ವೇದಿಕೆಯ ಮೇಲೆ ಹಾಲಬಾವಿ ವೀರಭದ್ರಪ್ಪನವರ ಬಂಧುಗಳಾದ ಸುರೇಶ ಮತ್ತು ಪಾರ್ವತಿ ಹಾಲಬಾವಿ, ರಶ್ಮಿ ಅಂಗಡಿ, ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ, ಶ್ರೀಮತಿ ಶಕುಂತಲಾ ಸಿಂದೂರ ಉಪಸ್ಥಿತರಿದ್ದರು. ಸ್ವಾಗತವನ್ನು ವಿನಾಯಕ ಮಾನ್ವಿ, ಪ್ರಾಸ್ತಾವಿಕ ನುಡಿಯನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಹಾಗೂ ನಿರೂಪಣೆಯನ್ನು ಶಿವಾನುಭವ ಸಮಿತಿ ಚೇರ್ಮನ್ ರಮೇಶ ಮ. ಕಲ್ಲನಗೌಡರ ಮಾಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದಗೌಡ ಪಾಟೀಲ, ದಾನಯ್ಯ ಗಣಾಚಾರಿ, ಕಳಸಾಪುರ ಶೆಟ್ಟರ್, ಐ.ಬಿ. ಬೆನಕೊಪ್ಪ, ರತ್ನಕ್ಕ ಪಾಟೀಲ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande