
ಬೆಂಗಳೂರು, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದಾದ್ಯಂತ ಇರುವ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಉತ್ತಮ ಪ್ರಮಾಣದ ನೀರಿನ ಸಂಗ್ರಹವಿದ್ದು, ಬೇಸಿಗೆಯಲ್ಲೂ ರೈತರಿಗೆ ಆಶಾದಾಯಕ ಜಲ ಭದ್ರತೆ ಲಭಿಸಿದೆ ಎಂದು ಎನ್. ಎಸ್. ಭೋಸರಾಜು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಒಟ್ಟು 3,788 ಕೆರೆಗಳ ಮೂಲಕ ಸುಮಾರು 4,45,009 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಪೂರೈಕೆ ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿನ ಬಹುತೇಕ ಕೆರೆಗಳು ಬೇಸಿಗೆಯಲ್ಲೂ ಉತ್ತಮ ನೀರಿನ ಮಟ್ಟವನ್ನು ಕಾಯ್ದುಕೊಂಡಿವೆ. ಒಟ್ಟು 165 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, 1,355 ಕೆರೆಗಳು ಶೇ. 51 ಕ್ಕಿಂತ ಹೆಚ್ಚು ನೀರಿನ ಸಂಗ್ರಹ ಹೊಂದಿವೆ. 1,143 ಕೆರೆಗಳಲ್ಲಿ ಶೇ. 50 ರಷ್ಟು ನೀರು ಉಳಿದಿದ್ದು, 959 ಕೆರೆಗಳಲ್ಲಿ ಶೇ. 30 ರಷ್ಟು ಸಂಗ್ರಹವಿದೆ.
ಜಿಲ್ಲಾವಾರು ಪರಿಶೀಲನೆಯಲ್ಲಿ ದಾವಣಗೆರೆ ಜಿಲ್ಲೆ ಅತ್ಯುತ್ತಮ ಸಾಧನೆ ತೋರಿದ್ದು, ಜಿಲ್ಲೆಯ 27 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಅದರ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆ ಯಲ್ಲಿ 46 ಕೆರೆಗಳು ಭರ್ತಿಯಾಗಿದ್ದು, ಉತ್ತಮ ನೀರಿನ ಸಂಗ್ರಹ ದಾಖಲಾಗಿದೆ.
ಇತರ ಉತ್ತಮ ಸಾಧನೆ ತೋರಿದ ಜಿಲ್ಲೆಗಳಲ್ಲಿ ಹಾಸನ ಜಿಲ್ಲೆ, ತುಮಕೂರು ಜಿಲ್ಲೆ ಹಾಗೂ ಕೋಲಾರ ಜಿಲ್ಲೆ ಸೇರಿವೆ.
ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ 145 ಏತ ನೀರಾವರಿ ಯೋಜನೆಗಳ ಮೂಲಕ 1,073 ಕೆರೆಗಳನ್ನು ತುಂಬಿಸಲಾಗುತ್ತಿದೆ. ಉತ್ತಮ ಮುಂಗಾರು ಮಳೆ ಹಾಗೂ ಸರ್ಕಾರದ ಜಲ ನಿರ್ವಹಣಾ ಕಾರ್ಯತಂತ್ರಗಳು ಈ ಉತ್ತಮ ನೀರಿನ ಮಟ್ಟಕ್ಕೆ ಕಾರಣವಾಗಿವೆ ಎಂದು ಸಚಿವರು ತಿಳಿಸಿದ್ದಾರೆ.
“ಮಾರ್ಚ್ ಅಂತ್ಯದ ವೇಳೆಗೆ ಕೆರೆಗಳಲ್ಲಿ ಇಷ್ಟೊಂದು ಪ್ರಮಾಣದ ನೀರು ಉಳಿದಿರುವುದು ಅತ್ಯಂತ ಪ್ರೋತ್ಸಾಹದಾಯಕ ಸಂಗತಿ. ಕೆರೆ ತುಂಬಿಸುವ ಕಾರ್ಯಕ್ರಮಗಳು ಹಾಗೂ ಪುನರುಜ್ಜೀವನ ಯೋಜನೆಗಳ ಯಶಸ್ಸಿಗೆ ಇದು ಸಾಕ್ಷಿಯಾಗಿದೆ” ಎಂದು ಎನ್. ಎಸ್. ಭೋಸರಾಜು ಹೇಳಿದ್ದಾರೆ.
ಬಯಲು ಸೀಮೆಯ ಜಿಲ್ಲೆಗಳಲ್ಲಿ ಸಂಸ್ಕರಿಸಿದ ನೀರು ಹಾಗೂ ಮೇಲ್ಮೈ ನೀರಿನ ನಿರಂತರ ಹರಿವನ್ನು ಖಚಿತಪಡಿಸುವ ಮೂಲಕ ಬೇಸಿಗೆಯಲ್ಲೂ ಕೆರೆಗಳು ಬತ್ತದಂತೆ ಕ್ರಮ ಕೈಗೊಳ್ಳಲಾಗಿದೆ. ಇದರ ಫಲವಾಗಿ ರಾಜ್ಯದಲ್ಲಿ ಜಲ ಸುರಕ್ಷತೆ ಹೆಚ್ಚಿದ್ದು, ಲಕ್ಷಾಂತರ ರೈತರಿಗೆ ನೇರ ಪ್ರಯೋಜನವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa