
ಟೆಹ್ರಾನ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಒಮಾನ್ ಕೊಲ್ಲಿಯಲ್ಲಿ ಇರಾನ್ ಧ್ವಜದಡಿ ಸಾಗುತ್ತಿದ್ದ ಕಂಟೈನರ್ ಹಡಗಿನ ಮೇಲೆ ಅಮೆರಿಕದ ನೌಕಾಪಡೆ ಗುಂಡಿನ ದಾಳಿ ನಡೆಸಿ ಅದನ್ನು ವಶಕ್ಕೆ ಪಡೆದ ಘಟನೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆಯನ್ನು ಉಂಟು ಮಾಡಿದೆ. ಈ ಘಟನೆ ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮ ಹಾಗೂ ಶಾಂತಿ ಮಾತುಕತೆಗಳಿಗೆ ಭಾರೀ ಹೊಡೆತ ನೀಡಿದೆ.
ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಿರುವ ಅಮೆರಿಕದ ಕ್ರಮವನ್ನು ಇರಾನ್ “ಸಶಸ್ತ್ರ ಕಡಲ್ಗಳ್ಳತನ” ಎಂದು ಬಣ್ಣಿಸಿದ್ದು, ಇದಕ್ಕೆ ಶೀಘ್ರದಲ್ಲೇ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದೆ.
ಇರಾನ್ ರಾಜ್ಯ ಪ್ರಸಾರಕ ಐಆರ್ಐಬಿ ವರದಿ ಪ್ರಕಾರ, ಇರಾನ್ ಮಿಲಿಟರಿ ತನ್ನ ಟೆಲಿಗ್ರಾಮ್ ಪೋಸ್ಟ್ನಲ್ಲಿ, “ಆಕ್ರಮಣಕಾರಿ ಅಮೆರಿಕ ಒಮಾನ್ ಸಮುದ್ರದ ನೀರಿನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಸಮುದ್ರ ಮಾರ್ಗದಲ್ಲಿ ಕಡಲ್ಗಳ್ಳತನ ನಡೆಸಿದೆ” ಎಂದು ಆರೋಪಿಸಿದೆ.
ಅಮೆರಿಕದ ನೌಕಾಪಡೆ ಹಡಗಿನ ನ್ಯಾವಿಗೇಷನ್ ಉಪಕರಣಗಳನ್ನು ನಾಶಪಡಿಸಿದ್ದು, ಹಡಗಿನ ಡೆಕ್ ಮೇಲೆ ತಮ್ಮ ಪಡೆಗಳನ್ನು ನಿಯೋಜಿಸಿದೆ ಎಂದು ಇರಾನ್ ಹೇಳಿದೆ. ಅಮೆರಿಕದ ಈ ಕ್ರಮಕ್ಕೆ ಇರಾನ್ ಸೇನೆ ಶೀಘ್ರದಲ್ಲೇ ಪ್ರತಿಕ್ರಿಯಿಸಲಿದೆ ಎಂದು ಎಚ್ಚರಿಕೆಯ ಸಂದೇಶದಲ್ಲಿ ತಿಳಿಸಲಾಗಿದೆ.
ಇನ್ನೊಂದೆಡೆ, ಅಮೆರಿಕದ ಮಿಲಿಟರಿ ಕೂಡ ಘಟನೆ ನಡೆದಿರುವುದನ್ನು ದೃಢಪಡಿಸಿದೆ. ಅಮೆರಿಕದ ವಿಧ್ವಂಸಕ ನೌಕೆಯೊಂದು ಇರಾನ್ ಧ್ವಜದ ಹಡಗಿನ ಮೇಲೆ ಹಲವಾರು ಸುತ್ತು ಗುಂಡು ಹಾರಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ.
ಅಮೆರಿಕದ ಪ್ರಕಾರ, ಈ ಹಡಗು ಹಾರ್ಮುಜ್ ಜಲಸಂಧಿಯ ಸಮೀಪ ಅಮೆರಿಕ ಹೇರಿದ್ದ ನೌಕಾ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿತ್ತು. ಇದೇ ಕಾರಣಕ್ಕೆ ಅದನ್ನು ತಡೆದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಯುಎಸ್ ಸೆಂಟ್ರಲ್ ಕಮಾಂಡ್ ಮಾಹಿತಿ ಪ್ರಕಾರ, ದಿಗ್ಬಂಧನ ಆರಂಭವಾದ ಬಳಿಕ ಈಗಾಗಲೇ 25ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳನ್ನು ಹಿಂದಿರುಗಿಸಲು ಅಥವಾ ಇರಾನ್ ಬಂದರುಗಳಿಗೆ ಮರಳಲು ಸೂಚಿಸಲಾಗಿದೆ.
ಈ ಘಟನೆಯ ಕೆಲವೇ ಗಂಟೆಗಳ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನೊಂದಿಗೆ ಮಾತುಕತೆ ನಡೆಸಲು ತಮ್ಮ ತಂಡವನ್ನು ಇಸ್ಲಾಮಾಬಾದ್ಗೆ ಕಳುಹಿಸುತ್ತಿರುವುದಾಗಿ ಘೋಷಿಸಿದ್ದರು. ಆದರೆ ಅಮೆರಿಕ ತನ್ನ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವವರೆಗೆ ಯಾವುದೇ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಅವರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ, ಹಾರ್ಮುಜ್ ಜಲಸಂಧಿಯ ಮೇಲಿನ ಅಮೆರಿಕದ ದಿಗ್ಬಂಧನ ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.
“ಅಮೆರಿಕ ರಾಜತಾಂತ್ರಿಕತೆಗೆ ದ್ರೋಹ ಬಗೆದಿದೆ. ಟ್ರಂಪ್ ಸರ್ಕಾರದ ನಡೆ ಪ್ರದೇಶದಲ್ಲಿ ಮತ್ತಷ್ಟು ಅಶಾಂತಿಗೆ ಕಾರಣವಾಗಬಹುದು” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಯುದ್ಧದ ವೇಳೆ ಹಾನಿಗೊಳಗಾದ ಸರ್ಕಾರಿ ಕಟ್ಟಡಗಳನ್ನು ಮಾರಾಟ ಮಾಡಲು ಇರಾನ್ ಸರ್ಕಾರ ನಿರ್ಧರಿಸಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಒಮಾನ್ ಕೊಲ್ಲಿಯಲ್ಲಿ ನಡೆದ ಈ ಘಟನೆ ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa