
ಬಳ್ಳಾರಿ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಹಕಾರಿ ಕ್ಷೇತ್ರದ ವಿಶ್ವಾಸಾರ್ಹ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ 2025-26ರ ಆರ್ಥಿಕ ಸಾಲಿನಲ್ಲಿ ಒಟ್ಟು 2448 ಕೋಟಿ ರೂಪಾಯಿ ವಹಿವಾಟು ನಡೆಸಿ, ಶೇ. 15.51 ರಷ್ಟು ಪ್ರಗತಿಯನ್ನು ಸಾಧಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಮೋಹಿತ ಮಸ್ಕಿ ಅವರು ತಿಳಿಸಿದ್ದಾರೆ.
ಸುಕೋ ಬ್ಯಾಂಕಿನ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಸುದ್ದಿಗಾರರಿಗೆ ಗುರುವಾರ ಈ ಮಾಹಿತಿ ನೀಡಿದ ಅವರು, ಸುಕೋ ಬ್ಯಾಂಕ್ ಒಟ್ಟು 7 ಕೋಟಿ ರೂಪಾಯಿಗಳ ಲಾಭಗಳಿಸಿದೆ. ಸುಕೋ ಬ್ಯಾಂಕ್ ಆರಂಭ ಆದಾಗಿನಿಂದಲೂ ಉತ್ತಮವಾದ ವ್ಯವಹಾರ ನಡೆಸುತ್ತ ಲಾಭವನ್ನು ಗಳಿಸುತ್ತಲೇ ಇದೆ. ಷೇರುದಾರರ ಬೆಂಬಲ ಮತ್ತು ಗ್ರಾಹಕರ ವಿಶ್ವಾಸಗಳ ಜೊತೆಯಲ್ಲಿ ಬ್ಯಾಂಕಿನ ವ್ಯವಹಾರ ಪ್ರತೀ ವರ್ಷ ವೃದ್ಧಿ ಆಗುತ್ತಲೇ ಇರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
ಸುಕೋ ಬ್ಯಾಂಕ್ ಕರ್ನಾಟಕದಾದ್ಯಂತ ಶಾಖೆಗಳನ್ನು ತೆರೆಯಲು ಪರವಾನಿಗೆ ಪಡೆದಿದೆ. ಪ್ರಸ್ತುತ 29 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸುಕೋ ಬ್ಯಾಂಕ್ ಒಟ್ಟು ರೂಪಾಯಿ 1489 ಕೋಟಿ ಮೊತ್ತದ ಠೇವಣಿ ಹೊಂದಿದೆ. ಒಟ್ಟು 959 ಕೋಟಿ ರೂಪಾಯಿಗಳ ಸಾಲವನ್ನು ವಿತರಣೆ ಮಾಡಿದೆ. ವಿತರಣೆ ಮಾಡಿರುವ ಸಾಲದಲ್ಲಿ ರೂಪಾಯಿ 25 ಲಕ್ಷ ಕ್ಕಿಂತ ಕಡಿಮೆ ಮೊತ್ತದ ಕಿರು ಸಾಲದ ಮೊತ್ತ ರೂಪಾಯಿ 563 ಕೋಟಿ ಆಗಿದ್ದು, ಈ ಮೊತ್ತ ಒಟ್ಟು ಸಾಲದ ಶೇ. 58.75% ರಷ್ಟು ಆಗಿದೆ. ಸುಕೋ ಬ್ಯಾಂಕ್ MSME ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬ್ಯಾಂಕಿನ (NPA) ಅನುತ್ಪಾದಕ ಆಸ್ತಿ ಶೇ. 5.8 ರಷ್ಟಿದೆ ಎಂದರು.
ಸುಕೋ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಆ್ಯಪ್ ಮೂಲಕ ತಮ್ಮ ಖಾತೆಯಲ್ಲಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ಕೇಂದ್ರ ಸರ್ಕಾರದ ಯುಪಿಐ ಹಣ ಪಾವತಿ ತಂತ್ರಜ್ಞಾನದ ವ್ಯವಸ್ಥೆಗೆ ಒಳಪಟ್ಟ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಯನ್ನು ಹೊಂದಿದೆ ಎಂದರು.
ಸದಾಕಾಲ ತಂತ್ರಜ್ಞಾನ ಮತ್ತು ಆಧುನೀಕತೆಗಳನ್ನು ದೈನಂದಿನ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮವಾದ ಗ್ರಾಹಕ ಸೇವೆ ನೀಡುತ್ತಾ ಅನೇಕ `ಪ್ರಥಮ'ಗಳ ಗೌರವಕ್ಕೆ - ಕೀರ್ತಿಗೆ ಮತ್ತು ಅಭಿನಂದನೆಗಳಿಗೆ ಸುಕೋ ಬ್ಯಾಂಕ್ ಒಳಗಾಗಿರುವುದು ಶ್ಲಾಘನೀಯ ಎಂದರು.
ಸುಕೋ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಎಸ್. ರವಿಸುಧಾಕರ್ ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ವೆಂಕಟ ಶಿವಯ್ಯ ಅವರು, ಗ್ರಾಹಕರ ವಿಶ್ವಾಸ, ಷೇರುದಾರರ ಬೆಂಬಲ ಮತ್ತು ಗುಣಮಟ್ಟದ ಸೇವೆಯ ಮೂಲಕ ಸುಕೋ ಬ್ಯಾಂಕ್ ವ್ಯವಹಾರವನ್ನು ದಿನೇ ದಿನೇ ವೃದ್ಧಿಗೊಳ್ಳಿಸಿಕೊಳ್ಳುತ್ತಿದೆ. ಪಾರದರ್ಶಕ ವ್ಯವಹಾರ, ತ್ವರಿತ ಸೇವೆ ಮತ್ತು ಸಕಾಲಿಕವಾಗಿ ಸ್ಪಂದನೆಗಳ ಮೂಲಕ ಬ್ಯಾಂಕ್ ವೇಗವಾಗಿ ಗ್ರಾಹಕರ ವಿಶ್ವಾಸವನ್ನು ಗಳಿಸುತ್ತಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್