
ಬೆಂಗಳೂರು, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಇಂದು ಬೆಳಗ್ಗೆ ಧಾರವಾಡದಲ್ಲಿ ನಡೆಯುತ್ತಿರುವ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹುಬ್ಬಳ್ಳಿಯ ವಿದ್ಯಾನಗರದ ಚಿಗರಿ ಬಸ್ ನಿಲ್ದಾಣದಲ್ಲಿ ಸರತಿಯಲ್ಲಿ ನಿಂತಾಗ ನನ್ನ ಮುಂದೆಯೇ ಮೂರು ಬಾರಿ ಸಂಸದರಾಗಿ , ವಿಧಾನ ಪರಿಷತ್ ಸದಸ್ಯರಾಗಿ ಅಪ್ರತಿಮ ಕಾರ್ಯ ನಿರ್ವಹಿಸಿದ್ದ ಪ್ರೊ.ಐ.ಜಿ ಸನದಿಯವರೂ ಟಿಕೆಟ್ ಕೊಳ್ಳುತ್ತಿದ್ದುದನ್ನು ನೋಡಿ ನನಗೆ ಆಶ್ಚರ್ಯವಾಯಿತು.
ಇಂಥ ಉನ್ನತ ಹುದ್ದೆಯಲ್ಲಿದ್ದ ಬೇರೆ ಯಾರಾದರೂ ರಾಜಕಾರಣಿಯಾಗಿದ್ದರೆ ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಅವರು ಇತರ ಸಾಮಾನ್ಯರಂತೆ ಬಸ್ಸಿನಲ್ಲಿ ಪಯಣಿಸುತ್ತಿದ್ದುದು ಅವರ ಸರಳತೆಯ ಪ್ರತೀಕವಲ್ಲದೇ ಮತ್ತೇನು?
ಅಷ್ಟೇ ಅಲ್ಲ ಬಸ್ಸಿನಲ್ಲಿ ಕುಳಿತುಕೊಳ್ಳಲು ನಮಗೆ ಒಂದೇ ಕಡೆ ಸ್ಥಳ ಸಿಗದಿದ್ದುದರಿಂದ ನಾವು ಪ್ರತ್ಯೇಕ ಸೀಟಿನಲ್ಲಿ ಕುಳಿತುಕೊಳ್ಳಬೇಕಾಯಿತು. ಆದರೆ ಅವರ ಮನಸ್ಸು ತಡೆಯದೇ ನನ್ನ ಪಕ್ಕದಲ್ಲಿ ಕುಳಿತವರಿಗೆ ಮನವಿ ಮಾಡಿ ನನ್ನ ಪಕ್ಕದಲ್ಲೇ ಬಂದು ಕುಳಿತರು.
ಸುಮಾರು ಅರ್ಧ ಗಂಟೆ ಪಯಣದಲ್ಲಿ ಅವರು ತಮ್ಮ ರಾಜಕೀಯ ಪಯಣ, ಅನುಭವದ ಜೊತೆಗೆ ತಮ್ಮ ಬಾಲ್ಯದ ನೆನಪೂ ಮಾಡಿಕೊಂಡರು. ಅಲ್ಲದೇ ಇನ್ನೊಂದು ಬದಿಯಲ್ಲಿ ಕುಳಿತ ಪ್ರಯಾಣಿಕರೊಬ್ಬರ ಯೋಗಕ್ಷೇಮ ವಿಚಾರಿಸಿ ಅವರಿಗೆ ಇಳಿಯಬೇಕಾದ ನಿಲ್ದಾಣದ ಕುರಿತು ಮಾರ್ಗದರ್ಶನ ಕೂಡ ಮಾಡಿದರು.
ಪ್ರೊ ಐ ಜಿ ಸನದಿ ಅವರು ಅತ್ಯಂತ ಬಡತನದಿಂದ ಮೇಲೆದ್ದು ಬಂದವರು. ಕನ್ನಡ ಮತ್ತು ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಜನಾನುರಾಗಿಯಾಗಿದ್ದರು.
ಕನ್ನಡ ಸಾಹಿತ್ಯ ಅವರ ಜೀವಾಳ. ಶರಣರ ವಚನಗಳು ಅವರ ಬಾಯಲ್ಲಿ ನಲಿಯುತ್ತಲೇ ಇರುತ್ತವೆ. ನಂತರ ಸಕ್ರಿಯ ರಾಜಕಾರಣದಲ್ಲಿ ಧುಮುಕಿ ಧಾರವಾಡ ದಕ್ಷಿಣ ಮತ್ತು ಹಾವೇರಿ ಕ್ಷೇತ್ರಗಳಿಂದ ಸಂಸದರಾಗಿ ಆಯ್ಕೆಯಾದವರು.
ಒಂದು ಅವಧಿಗೆ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
ಇಷ್ಟೆಲ್ಲ ಹುದ್ದೆಗಳನ್ನು ನಿಭಾಯಿಸಿದ್ದ ಪ್ರೊ. ಸನದಿಯವರ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಕೋಟ್ಯಧಿಪತಿಗಳಾಗುತ್ತಿದ್ದರು. ಆದರೆ ಅವರದ್ದು ಅತ್ಯಂತ ಸರಳ ಹೃದಯ. ಹರಿಶ್ಚಂದ್ರ ಕಾವ್ಯದ ಸಾಲುಗಳನ್ನು ನಿರರ್ಗಳವಾಗಿ ಹೇಳುವ ಅವರು ನಮ್ಮ ಪಯಣದ ಅರ್ಧ ಗಂಟೆಯಲ್ಲಿ ಅತ್ಯಂತ ಹೃದಯಂಗಮವಾಗಿ ವರ್ಣಿಸಿದ ಅವರ ಪರಿಯನ್ನು ನೋಡಿ ನನ್ನ ಹೃದಯ ದ್ರವಿಸಿ ಹೋಯಿತು.
ರಸ್ತೆಯ ಮೇಲೆ ಯಾರೇ ಸಿಗಲಿ ಅವರು ಮಗುವಾದರೂ ಸೈ ಪ್ರೀತಿಯಿಂದ ಮಾತನಾಡಿಸುವುದನ್ನು ನಾನು ಕಣ್ಣಾರೆ ಕಂಡು ಅವರ ಸರಳ ಸಜ್ಜನಿಕೆಗೆ ದಂಗಾಗಿದ್ದೆ. ಇಂಥ ಆಧುನಿಕ ಯುಗದಲ್ಲೂ ಇಷ್ಟೊಂದು ಸರಳ ನಾಯಕರಿರಲು ಸಾಧ್ಯವೇ? ಎಂಬ ಪ್ರಶ್ನೆಗೆ ಪ್ರೊ.ಐ.ಜಿ. ಸನದಿಯವರೇ ಉತ್ತರ.
ಇವರಿಂದ ಇಂದಿನ ರಾಜಕಾರಣಿಗಳು ಕಲಿಯಬೇಕಾದದ್ದು ಬಹಳವಿದೆ. ನಾವೂ ಕೂಡ ಅವರ ಆದರ್ಶ ಪಾಲಿಸಿದರೆ ಸಮಾಜ ಉದ್ಧಾರವಾಗುತ್ತದೆ. ಅವರ ಕೆಲವು ಕ್ಷಣಗಳ ಸಹಯೋಗದಲ್ಲಿ ನನಗನಿಸಿದ್ದು, ಸಂತನೆಂದರೆ ಯಾರು ದಿವ್ಯತೆಯ ಅರಿತವರು
ಸರಳತೆಯ ಸೂತ್ರದಲಿ ಸುಖವ ಕಂಡವರು. ಪ್ರೊ. ಐ.ಜಿ.ಸನದಿಯಂಥವರ ಸಂತತಿ ಅಪಾರವಾಗಿ ಬೆಳೆಯಲಿ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ