
ಕೋಲಾರ, ೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲೆಯು ೨೦೨೫-೨೬ನೇ ಸಾಲಿನ ಚಾಲ್ತಿ ಬೇಡಿಕೆಯ ಕಂದಾಯವನ್ನು ಶೇಕಡ ೧೦೦ ರಷ್ಟು ವಸೂಲಿ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ, ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಡಾ. ಪ್ರವೀಣ್ ಪಿ. ಬಾಗೇವಾಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತೆರಿಗೆ ಹಣದ ಸದ್ಬಳಕೆಯ ಬಗ್ಗೆ ಮಾಹಿತಿ ನೀಡಿದ ಅವರು, ಸಂಗ್ರಹವಾದ ಕಂದಾಯದಿ0ದ ಗ್ರಾಮೀಣ ಭಾಗದ ನಾಗರಿಕರಿಗೆ ನೇರ ಸವಲತ್ತು ಒದಗಿಸಲು ಸಾಧ್ಯವಾಗಲಿದೆ. ಮುಖ್ಯವಾಗಿ ಕುಡಿಯುವ ನೀರಿನ ಪೂರೈಕೆ, ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಹಾಗೂ ಗ್ರಾಮಗಳ ನೈರ್ಮಲ್ಯ ಕಾಪಾಡಲು ಈ ಮೊತ್ತ ಬಳಕೆಯಾಗಲಿದೆ. ಅಲ್ಲದೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಬಾಕಿ ವೇತನ, ಭಿಕ್ಷಕರ ಕರ, ಗ್ರಂಥಾಲಯ ಕರ ಸೇರಿದಂತೆ ಶಾಸನಬದ್ಧ ಪಾವತಿಗಳನ್ನು ಮಾಡುವುದು ಇದರಿಂದ ಸುಲಭವಾಗಲಿದೆ, ಎಂದರು.
ಈ ಬಾರಿಯ ಯಶಸ್ಸಿನ ಹಿಂದಿರುವ ತಾಂತ್ರಿಕ ಬದಲಾವಣೆಗಳ ಕುರಿತು ವಿವರಿಸಿದ ಅವರು ಈ ಹಿಂದೆ ದಾಖಲೆಗಳಿಂದ ಹೊರಗುಳಿದಿದ್ದ ಆಸ್ತಿಗಳನ್ನು ಪತ್ತೆ ಹಚ್ಚಿ, ಅವುಗಳನ್ನು ತಂತ್ರಾ0ಶದಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.
ತೆರಿಗೆ ನಿಯಮಾವಳಿಗಳಲ್ಲಿ ಹೊಸತನ ತರುವ ಮೂಲಕ ಆಸ್ತಿ ತೆರಿಗೆಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಲಾಗಿದೆ. ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಮನೆ-ಮನೆಗೆ ಭೇಟಿ ನೀಡಿ ತೆರಿಗೆ ವಸೂಲಾತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಈ ಗುರಿ ಸಾಧನೆಗೆ ನಾಂದಿಯಾಯಿತು ಎಂದರು.
ಜಿಲ್ಲೆಯ ಈ ಸಾಧನೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ ಅವರು, ೨೦೨೫-೨೬ನೇ ಸಾಲಿನ ಕಂದಾಯ ವಸೂಲಾತಿ ಪ್ರಕ್ರಿಯೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳು, ಪಂಚಾಯಿತಿ ನೌಕರರು ಮತ್ತು ಸಿಬ್ಬಂದಿಗೆ ಜಿಲ್ಲಾ ಪಂಚಾಯತ್ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಎಂದು ತಿಳಿಸಿದರು. ತೆರಿಗೆ ಪಾವತಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿದ ಸಾರ್ವಜನಿಕರಿಗೂ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್