
ಕೋಲಾರ, ೦೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ನಗರದ ಸ್ವಾಮಿನಾಥಪುರಂ ಮುಖ್ಯರಸ್ತೆಯ ಕೋರಮಂಡೆಲ್ ಓಟ್ ಲೈನ್ ಪ್ರದೇಶದಲ್ಲಿ ಇರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಹಾಗೂ ಶ್ರೀ ತಿರುವೆಂಗಡ ಮುಡಯನ್ ದೇವಸ್ಥಾನಗಳಲ್ಲಿ ದ್ವಿತೀಯ ವಾರ್ಷಿಕ ಬ್ರಹ್ಮೋತ್ಸವವು ಏಪ್ರಿಲ್ ೪ ರಿಂದ ೬ರವರೆಗೆ ಮೂರು ದಿನಗಳ ಕಾಲ ಭಕ್ತಿ ಮತ್ತು ಸಂಭ್ರಮದಿ0ದ ನಡೆಯಲಿದೆ.
ಬ್ರಹ್ಮೋತ್ಸವದ ಅಂಗವಾಗಿ ಏಪ್ರಿಲ್ ೩ರಂದು ಶುಕ್ರವಾರ ಸ್ವಾತಿ ನಕ್ಷತ್ರದ ವಿಶೇಷ ಪೂಜೆಗಳನ್ನು ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಏಪ್ರಿಲ್ ೪ರಂದು ಶನಿವಾರ ಬೆಳಿಗ್ಗೆ ೭ ಗಂಟೆಯಿ0ದ ಪ್ರಬಂಧ ಪಾರಾಯಣ, ವೇದಪಾರಾಯಣ, ತಿರುವಾರಾಧನೆ, ಅನುಜ್ಞೆ, ಸಭಾ ಪ್ರಾರ್ಥನೆ ಹಾಗೂ ವಿಶ್ವಕ್ಸೇನ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ ೫ರಂದು ಭಾನುವಾರ ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ಪ್ರಬಂಧ ಪಾರಾಯಣ, ಗೋಷ್ಠಿ, ದ್ವಾರ ತೋರಣ ಹಾಗೂ ಧ್ವಜಸ್ತಂಭ ಆರಾಧನೆ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಅಹಲ್ಯಾ ಮಾತೃ ಮಂಡಳಿಯವರಿ0ದ ಭಜನೆ ಕಾರ್ಯಕ್ರಮ ನಡೆಯಲಿದೆ.
ಉತ್ಸವದ ಕೊನೆಯ ದಿನವಾದ ಏಪ್ರಿಲ್ ೬ರಂದು ಸೋಮವಾರ ಬೆಳಿಗ್ಗೆಯಿಂದ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಮಧ್ಯಾಹ್ನ ಹೋಮ-ಹವನಗಳು ನಡೆಯಲಿವೆ. ರಾತ್ರಿ ಶ್ರೀ ವೆಂಕಟರಮಣ ಸ್ವಾಮಿ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ನಗರ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.
ಮೂರೂ ದಿನಗಳ ಕಾಲ ಭಕ್ತರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಮಹೇಂದ್ರನ್ ಹಾಗೂ ಸದಸ್ಯರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್