ಕೊಪ್ಪಳ ಗ್ರಾಮೀಣ ; ಜನಗಣತಿ - ನಿಯೋಜನೆ
ಕೊಪ್ಪಳ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರವು 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಅಧಿಸೂಚನೆಯನ್ನು ಹೊರಡಿಸಿದ್ದು, ಅದರನ್ವಯ ಮೊದಲ ಹಂತದಲ್ಲಿ ಸ್ವಯಂ ಗಣತಿ ಹಾಗೂ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವನ್ನು ಏಪ್ರಿಲ್ ಮತ್ತು ಮೇ 2026ರಲ್ಲಿ ಕೈಗೊಳ್ಳಲು ನಿರ್ಧರಿಸಲ
ಕೊಪ್ಪಳ ಗ್ರಾಮೀಣ ; ಜನಗಣತಿ - ನಿಯೋಜನೆ


ಕೊಪ್ಪಳ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರವು 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಅಧಿಸೂಚನೆಯನ್ನು ಹೊರಡಿಸಿದ್ದು, ಅದರನ್ವಯ ಮೊದಲ ಹಂತದಲ್ಲಿ ಸ್ವಯಂ ಗಣತಿ ಹಾಗೂ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವನ್ನು ಏಪ್ರಿಲ್ ಮತ್ತು ಮೇ 2026ರಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಜನಗಣತಿ ಕಾರ್ಯದ ಭಾಗವಾಗಿ ಸ್ವಯಂ ಗಣತಿ ಕಾರ್ಯವನ್ನು ಏಪ್ರಿಲ್ 1 ರಿಂದ 15 ವರೆಗೆ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯ ನಡೆಯಲಿದೆ. ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವನ್ನು ಏಪ್ರಿಲ್ 16 ರಿಂದ ಮೇ 15 ರವರೆಗೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಜನಗಣತಿ 2027 ಸಂಪೂರ್ಣ ಡಿಜಿಟಲ್ ಜನಗಣತಿಯಾಗಿದ್ದು, ಮೊಬೈಲ್ ಆ್ಯಪ್ ಮತ್ತು ವೆಬ್ ಪೋರ್ಟಲ್ ಮೂಲಕ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಮೊದಲ 15 ದಿನಗಳ ಕಾಲ ವೆಬ್ ಪೋರ್ಟಲ್ https://se.census.gov.in ಮೂಲಕ ಸ್ವಯಂ ಗಣತಿಗೆ ಅವಕಾಶವಿರುತ್ತದೆ. ಅದರಂತೆ ಮನೆಯ ಯಾವುದೇ ಸದಸ್ಯರು 15-20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್/ಇ-ಮೇಲ್ನಲ್ಲಿ ಸ್ವಯಂ-ಗಣತಿ ಐಡಿ ಯನ್ನು ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ಧೃಡೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ ಐಡಿ ಯನ್ನು ಅವರೊಂದಿಗೆ ಹಂಚಿಕೊಳ್ಳಬೇಕು.

ಕೊಪ್ಪಳ ತಾಲೂಕಿನ ಗ್ರಾಮೀಣ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯಕ್ಕಾಗಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಗಣತಿದಾರರು ಏ.16 ರಿಂದ ಮೇ 15 ರವರೆಗೆ ತಮಗೆ ಹಂಚಿಕೆ ಮಾಡಲಾದ ಬ್ಲಾಕ್ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ನಿಗದಿತ ನಮೂನೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸುವರು. ಕೊಪ್ಪಳ ಗ್ರಾಮೀಣ ಭಾಗದಲ್ಲಿ ಜನಗಣತಿ ಚಾರ್ಜ್ ಅಧಿಕಾರಿಯನ್ನಾಗಿ ಕೊಪ್ಪಳ ತಹಶೀಲ್ದಾರರನ್ನು ನೇಮಿಸಲಾಗಿದೆ. ಜನಗಣತಿ ಕಾರ್ಯಕ್ಕೆ 593 ಮನೆಗಳ ಪಟ್ಟಿ ಮಾಡಲಾಗಿದ್ದು, 653 ಗಣತಿದಾರಾರು ಹಾಗೂ 109 ಮೇಲ್ವಿಚಾರಕರು ಸೇರಿದಂತೆ ಒಟ್ಟು 762 ಅಧಿಕಾರಿ, ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ.

2027ರ ಭಾರತದ ಜನಗಣತಿ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ವಯಂ ಗಣತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಮತ್ತು ಮನೆ ಮನೆಗಳಿಗೆ ಗಣತಿದಾರರ ಭೇಟಿ ನೀಡಿದಾಗ ಅಗತ್ಯ ಮಾಹಿತಿ ನೀಡುವ ಮೂಲಕ ಸಹಕರಿಸಿ ಜಿಲ್ಲೆಯ ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿರುವ ಮನೆಗಳ ಪಟ್ಟಿ ಹಾಗೂ ಸ್ವಯಂ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ತಹಶೀಲ್ದಾರರು ಹಾಗೂ ಜನಗಣತಿ ಚಾರ್ಜ್ ಅಧಿಕಾರಿಗಳಾದ(ಗ್ರಾಮೀಣ) ಬಸವರಾಜ ತೆನ್ನಳ್ಳಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande