
ಕೋಲಾರ, ಏಪ್ರಿಲ್ ೦೨ (ಹಿ.ಸ) :
ಆ್ಯಂಕರ್ : ಬುದ್ಧ ಪೂರ್ಣಿಮೆಯು ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣವನ್ನು ಸ್ಮರಿಸುವ ಅತ್ಯಂತ ಪವಿತ್ರ ದಿನವಾಗಿದೆ. ಶಾಂತಿ, ಅಹಿಂಸೆ ಮತ್ತು ಕರುಣೆಯ ಸಂದೇಶವನ್ನು ಸಾರಿದ ಬುದ್ಧನ ತತ್ವಗಳು ಇಂದಿಗೂ ಪ್ರಸ್ತುತ. ಈ ದಿನದಂದು ಜ್ಞಾನದ ಬೆಳಕನ್ನು ಅಳವಡಿಸಿಕೊಂಡು, ಆಂತರಿಕ ಶಾಂತಿ ಮತ್ತು ಸಹೋದರತ್ವವನ್ನು ಉತ್ತೇಜಿಸುವುದು ನಮ್ಮ ಆಶಯವಾಗಿರಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ ಕರೆ ನೀಡಿದರು.
ಕೆಜಿಎಫ್ ನಗರದ ಅಶೋಕ ದಮ್ಮ ದೂತ ಬುದ್ದ ಸಂಘದಲ್ಲಿ ಬುದ್ದ ಹುಣ್ಣಿಮೆಯ ಕಾಯ್ರಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಗವಾನ್ ಗೌತಮ ಬುದ್ಧನ ಜನ್ಮದಿನವಾದ 'ಬುದ್ಧ ಪೂರ್ಣಿಮಾ' ಅಥವಾ 'ವೈಶಾಖ ಪೂರ್ಣಿಮೆ'ಯನ್ನು ಆಚರಿಸುತ್ತಿದ್ದೇವೆ. ಇದು ಕೇವಲ ಒಂದು ಧಾರ್ಮಿಕ ಹಬ್ಬವಲ್ಲ, ಬದಲಾಗಿ ಜ್ಞಾನ ಮತ್ತು ಶಾಂತಿಯ ಹಬ್ಬವಾಗಿದೆ. ಸಿದ್ಧಾರ್ಥನು ಐಹಿಕ ಸುಖಗಳನ್ನು ತ್ಯಜಿಸಿ, ಸತ್ಯ ಮತ್ತು ಶಾಂತಿಗಾಗಿ ಅನ್ವೇಷಣೆ ನಡೆಸಿ ಬುದ್ಧನಾದನು. ಅಹಿಂಸೆಯೇ ಪರಮ ಧರ್ಮ ಎಂದು ಸಾರಿದನು. ಕೋಪವನ್ನು ಪ್ರೀತಿಯಿಂದ, ಕೆಟ್ಟದ್ದನ್ನು ಒಳ್ಳೆಯದರಿಂದ ಗೆಲ್ಲಬೇಕು ಎಂಬುದು ಅವನ ಪ್ರಮುಖ ಬೋಧನೆಯಾಗಿತ್ತು ಎಂದು ವಿವರಿಸಿದರು.
ಜೀವನದಲ್ಲಿ ದುಃಖಕ್ಕೆ ಕಾರಣಗಳನ್ನು ಹುಡುಕಿ, ಅದರಿಂದ ಮುಕ್ತಿ ಪಡೆಯಲು ಬುದ್ಧನು 'ಅಷ್ಟಾಂಗ ಮಾರ್ಗಗಳನ್ನು' ತೋರಿದನು. ಇಂದಿನ ಸಂಘರ್ಷಮಯ ಜಗತ್ತಿನಲ್ಲಿ, ಬುದ್ಧನ ಶಾಂತಿ ಮತ್ತು ಕರುಣೆಯ ತತ್ವಗಳು ತುಂಬಾ ಅವಶ್ಯಕ. ಸಹನೆ, ದಯೆ ಮತ್ತು ಮೈತ್ರಿಯ ಭಾವನೆಗಳನ್ನು ಬೆಳೆಸಿಕೊಳ್ಳುವುದು ನಮ್ಮ ಜೀವನಕ್ಕೆ ಅವಶ್ಯಕವೆಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ. ನಾರಾಯಣಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪವಿತ್ರ ದಿನದಂದು, ನಾವು ಬುದ್ಧನ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪಣ ತೊಡೋಣ ಎಂದು ಕರೆ ನೀಡಿದರು.
ಕೆಜಿಎಫ್ ಮಹಾಬೋಧಿ ಅಶೋಕ ದಮ್ಮ ಧೂತ ಬುದ್ದ ಸಂಘದ ಬುದ್ದ ಗುರುಗಳಾದ ಕೆಮೆಂಡೋ ಬಂತೇಜೀ, ಬುದ್ದ ದತ್ತ ಥೇರೋ ಅವರುಗಳು ಸಾನ್ನಿದ್ಯ ವಹಿಸಿದ್ದು, ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಅರ್ಜುನ್ ರವರ ೯೮ನೇ ಹುಟ್ಟು ಹಬ್ಬದ ಪ್ರಯುಕ್ತ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಉಪಾಸಕ ಜಯಪ್ರಕಾಶ್, ಉಪಾಸಕಿ ಮನಿ ಮೇಘಲೈ, ಡಾಕ್ಟರ್ ಕೃಷ್ಣಕುಮಾರ್, ಆನಂದನ್, ಸೆಲ್ವಿ, ಪುರುಷೋತ್ತಮನ್, ರಾಜ ವಿಕ್ರಂ, ಪ್ರಭುರಾಜ್ ಓಂ ಪ್ರಕಾಶ್, ಜನಾರ್ದನ, ಭೂಮಿ ಪ್ರತಾಪ್ಕುಮಾರ್, ಸಿ.ಎಂ.ಎ. ಮಿಲಿಂದ್, ಮೈಯಲಗನ್, ಉಪಾಸಕರು ಭಾಗವಹಿಸಿದ್ದರು.
ಶಾಂತಿ, ಪೂಬಲನ್ ಕುಟುಂಬದ ವತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ದಿ. ಸಿ.ಎಂ.ಆರ್ಮುಗ0 ಭಾಗ್ಯಮ್ಮ ಅವರ ಕುಟುಂಬದ ಡಾ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಂತಲಕ್ಷಿ ಡಾ, ಇಂಗರ್ಸಾಲ್ ಕಾರ್ಯಕ್ರಮಕ್ಕೆ ನೆರವು ನೀಡಿದರು.
ವೈದ್ಯರಾದ ಡಾ. ಪೂರ್ಣೇಶನ್ರಾಜು ಸ್ವಾಗಸಿದರು. ಉಪಾಸಕ ಡಾ. ಆರ್.ಪ್ರಭುರಾಂ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್