


ಬಳ್ಳಾರಿ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವರ್ತಮಾನವನ್ನು ಸರಿಯಾಗಿ ನಿರ್ವಹಣೆ ಮಾಡುವುದೇ ಉತ್ತಮವಾದ ಭವಿಷ್ಯ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ ಶಿವಾನುಭವ ಸಂಪದ - 12ರಲ್ಲಿ ಆಶೀರ್ವಾದ ಮಾಡಿದ ಶ್ರೀಗಳು, ವರ್ತಮಾನವನ್ನು ಆಧರಿಸಿ ಭವಿಷ್ಯ ನಿರ್ಮಾಣ ಆಗಲಿದೆ. ಅಂದರೆ, ವರ್ತಮಾನದಲ್ಲಿ ಸತ್ಯ, ಧರ್ಮ, ಅಹಿಂಸೆ, ನೀತಿ ಮತ್ತು ಆಚಾರ - ವಿಚಾರಗಳನ್ನು ಪಾಲಿಸಿದಲ್ಲಿ ಉತ್ತಮವಾದ ಭವಿಷ್ಯ ಸಹಜವಾಗಿಯೇ ರೂಪುಗೊಳ್ಳಲಿದೆ ಎಂದರು.
ಧರ್ಮದ ಬಗ್ಗೆ ತಿಳಿಯುವುದು ಸಾಕಷ್ಟಿದೆ. ಸಾತ್ವಿಕ ಜೀವನವನ್ನು ನಡೆಸುವುದೂ ಕೂಡ ಸಹಜ ಧರ್ಮದ ಭಾಗ. ಸಂಸಾರದಲ್ಲಿ ಇದ್ದುಕೊಂಡು ಆಚಾರ - ವಿಚಾರಗಳಲ್ಲಿ ಪರರಿಗೆ ಒಳಿತನ್ನು ಕೋರುವುದು - ಬೇರೆಯವರಿಗೆ ಒಳ್ಳೆಯದನ್ನು ಮಾಡುವುದು, ನೈತಿಕ ಚೌಕಟ್ಟಿನಲ್ಲಿ ಜೀವನ ನಡೆಸುವುದು ಕೂಡ ಧರ್ಮದ ಭಾಗವಾಗಿರುತ್ತದೆ ಎಂದರು.
ಗುತ್ತಿಗೆದಾರರಾದ ಎಂ. ಚಂದ್ರಶೇಖರಗೌಡ ಅವರು `ಧರ್ಮೋ ರಕ್ಷತಿ ರಕ್ಷಿತಃ' ವಿಷಯದ ಉಪನ್ಯಾಸ ನೀಡಿ, ದೇಶ - ಕಾಲವನ್ನು ಮೀರಿದ್ದು ಧರ್ಮ. ಧಾರಣ ಮತ್ತು ಪೋಷಣದ ಆಚರಣೆಯೇ ಧರ್ಮ. ಧರ್ಮವನ್ನು ಬಿತ್ತಿದಾಗಲೇ ಧರ್ಮದ ಫಲ ಸಿಗುತ್ತದೆ. ಧರ್ಮ ಪದಕ್ಕೆ ವಿಶಾಲಾರ್ಥವಿದೆ. ಧರ್ಮದ ವ್ಯಾಪ್ತಿಯು ಅಗಣಿತವಾಗಿದೆ. ಇಹ - ಪರದ ಚಿಂತನೆಗಳ ತಿರುಳು ಧರ್ಮವಾಗಿದೆ ಎಂದರು.
ಆಧುನಿಕ ಯುಗದಲ್ಲಿ ಧರ್ಮವನ್ನು ನಾನಾ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಸಹಜಧರ್ಮ, ನಿಸರ್ಗಧರ್ಮ, ವ್ಯಕ್ತಿಧರ್ಮ - ವೃತ್ತಿಧರ್ಮ, ಮಾನವಧರ್ಮ ಎಲ್ಲೆಲ್ಲೂ ಬಳಕೆಯಾಗುತ್ತಿವೆ. ಎಲ್ಲಾ ಸಂದರ್ಭಗಳಲ್ಲಿ ಧರ್ಮವನ್ನು ನಾವು ಸರಿ ದಾರಿಯಲ್ಲಿ ಬಳಕೆ ಮಾಡಿದ್ದಲ್ಲಿ, ಆ ಧರ್ಮವು ನಮ್ಮನ್ನು ಸರಿಯಾದ ದಾರಿಯಲ್ಲೇ ಕರೆದುಕೊಂಡು ಹೋಗುತ್ತದೆ ಎಂದರು.
ಭಾರತೀಯ ರೆಡ್ಕ್ರಾಸ್ನ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಎಂ.ಎ. ಷಕೀಬ್ ಅವರು, ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯನ್ನು ನೀಡುತ್ತದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದೂ ಧರ್ಮದ ಪಾಲನೆ ಮಾಡಿದಂತೆ. ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಪ್ರಾಥಮಿಕ ಚಿಕಿತ್ಸೆ ಮತ್ತು ಸಿಪಿಆರ್ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ - ಆಸಕ್ತಿಗೆ ಉಚಿತವಾಗಿ ನೀಡುತ್ತಿದೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ಲು ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಉಪನ್ಯಾಸಕರಾದ ಟಿ. ಹೇಮಂತ್ ಕುಮಾರ್ ಅವರು, ಆಧ್ಯಾತ್ಮವಿಲ್ಲದ ವಿದ್ಯೆ, ರಾಮನಿಲ್ಲದ ಅಯೋಧ್ಯೆ ಇದ್ದಂತೆ. ಕಾರಣ ಪ್ರತಿಯೊಬ್ಬರೂ ವಿದ್ಯೆಯ ಜೊತೆಯಲ್ಲಿ ಆಧ್ಯಾತ್ಮ, ಮಾನವೀಯತೆ, ಧರ್ಮಪಾಲನೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರಜ್ಞಾ ಕೆ.ವಿ. ಅವರು, ಮಹಿಳಾ ಆತ್ಮಾಭಿಮಾನದ ಸಂಕೇತವೇ ಅಕ್ಕಮಹಾದೇವಿ. ಮಹಿಳಾ ಸ್ವಾತಂತ್ರ್ಯ, ಭಕ್ತಿ, ಶ್ರದ್ಧೆ, ಅಂತಃಕರಣಗಳನ್ನು ಅಳವಡಿಸಿಕೊಂಡು ಸಾಧನಾ ಮಾರ್ಗದತ್ತ ಹೆಜ್ಜೆ ಹಾಕಿ ಅನೇಕರಿಗೆ ಆದರ್ಶವಾಗಿದ್ದಾರೆ ಎಂದರು.
ಅಕ್ಕನ ಬಳಗದ ಸುರೇಖಾ ಮಲ್ಲನಗೌಡ ಮತ್ತು ಕೆ. ಪಾರ್ವತಿ ಅವರು ಪ್ರಾರ್ಥನೆ ಸಲ್ಲಿಸಿದರು. ಅಕ್ಕನ ಬಳಗದ ಎಚ್.ಎಂ. ಶಕುಂತಲ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಕೆ. ಮನಸ್ವಿ ಅವರು ವಂದನಾರ್ಪಣೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್