

ಕೊಪ್ಪಳ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗವಿಶ್ರೀ ನಗರದ ಮೇದಾರ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರ ಇರುವ ಐತಿಹಾಸಿಕ ಸುಕ್ಷೇತ್ರ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಶ್ರೀ ಶೇಖಣಾಚಾರ್ಯ ಸ್ಮಾರಕ ಭವನದ ಲೋಕಾರ್ಪಣೆಯನ್ನು ದೇವಕಿಬಾಯಿ ಶಿಲ್ಪಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕೊಪ್ಪಳದ ಇತಿಹಾಸದಲ್ಲಿ ಬಹುದೊಡ್ಡ ಮೈಲುಗಲ್ಲಾಗಿ ಉಳಿಯುವ ದೈವೀ ಕಾಯಕ ದೇವಸ್ಥಾನದ ಅಧ್ಯಕ್ಷರು ಮತ್ತು ಹನುಮನಾರಾಧಕರಾದ ಪ್ರಕಾಶ ಶಿಲ್ಪಿ ಅವರಿಂದ ನಡೆಯುತ್ತಿದೆ, ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಪ್ರತಿದಿನ ಒಂದರಂತೆ ಮಡಿಯೊಂದಿಗೆ 7004 ಹನುಮನ ವಿಗ್ರಹ ತಯಾರಿಸಿ ಪೂಜೆ ಅಭಿμÉೀಕ ನೆರವೇರಿಸಿ ಪ್ರಸಾದ ತೆಗೆದುಕೊಳ್ಳುವ ಕಾಯಕ ಇಡೀ ವಿಶ್ವದ ಇತಿಹಾಸದಲ್ಲಿ ಸಿಗುವದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ನಗರಸಭೆ ಸದಸ್ಯ ಗುರುರಾಜ ಹಲಗೇರಿ ಅವರು, ದಿನೇ ದಿನೇ ಅಪಾರ ಭಕ್ತರನ್ನು ಹೊಂದುತ್ತಿರುವ ಈ ದೇವಸ್ಥಾನ ಮುಂದೆ ಅಂಜನಾದ್ರಿಯಂತೆ ವಿಶ್ವವ್ಯಾಪಿ ಜನಪ್ರಿಯ ಆಗಲಿದೆ ಎಂದರು.
ಹುಬ್ಬಳ್ಳಿಯ ವೇ. ಮೂ. ಸೋಮಾಚಾರ್ಯ ರಾಮಾಚಾರ್ಯ ಕಡ್ಲಾಸ್ಕರ್ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಈ ಸಂದರ್ಭದಲ್ಲಿ ಹನುಮನಾರಾಧಕರಾದ ಪ್ರಕಾಶ ಶಿಲ್ಪಿ, ಶಿಕ್ಷಕ ವಿರೇಶ ಚೋಳಪ್ಪನವರ, ಮಂಜುನಾಥ ಶಿಲ್ಪಿ, ಪವನಕುಮಾರ ಶಿಲ್ಪಿ, ಪ್ರಸನ್ನ ಶಿಲ್ಪಿ, ಪುನೀತ ಶಿಲ್ಪಿ, ರವಿಕುಮಾರ ಗದಗ ಸೇರಿ ನೂರಾರು ಅಜ್ಜನ ಭಕ್ತರು ಆಗಮಿಸಿದ್ದರು. ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್