ಕೆಎಲ್ ರಾಹುಲ್, ಸ್ಟಬ್ಸ್, ಮಿಲ್ಲರ್ ಸಿಡಿಲಾಟ : ಆರ್.ಸಿ.ಬಿ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ 6 ವಿಕೆಟ್ ಜಯ
ಬೆಂಗಳೂರು, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳಿಂದ ಸೋಲು ಕಂಡಿತು. ಕೊನೆಯ ಓವರ್ವರೆಗೂ ಸಾಗಿದ ತೀವ್ರ ಪೈಪೋಟಿಯಲ್ಲಿ ಕೆಎಲ್ ರಾಹುಲ್, ಟ್ರಿಸ್
Ipl


ಬೆಂಗಳೂರು, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳಿಂದ ಸೋಲು ಕಂಡಿತು. ಕೊನೆಯ ಓವರ್ವರೆಗೂ ಸಾಗಿದ ತೀವ್ರ ಪೈಪೋಟಿಯಲ್ಲಿ ಕೆಎಲ್ ರಾಹುಲ್, ಟ್ರಿಸ್ಟನ್ ಸ್ಟಬ್ಸ್ ಮತ್ತು ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಆಟ ಡೆಲ್ಲಿಗೆ ಗೆಲುವು ತಂದುಕೊಟ್ಟಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌.ಸಿ.ಬಿ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ಗಳ ಸಾಧಾರಣ ಮೊತ್ತ ದಾಖಲಿಸಿತು. ತಂಡದ ಆರಂಭ ಉತ್ತಮವಾಗಿತ್ತು. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 31 ಎಸೆತಗಳಲ್ಲಿ 52 ರನ್ಗಳ ಜೊತೆಯಾಟ ನೀಡಿದರು. ಕೊಹ್ಲಿ 19 ರನ್ ಗಳಿಸಿ ಔಟಾದರೆ, ನಂತರ ಬಂದ ದೇವದತ್ ಪಡಿಕ್ಕಲ್ 18 ರನ್ ಗಳಿಸಿ ನಿರಾಸೆ ಮೂಡಿಸಿದರು.

ಫಿಲ್ ಸಾಲ್ಟ್ ಮಾತ್ರ ಆಕ್ರಮಣಕಾರಿ ಆಟ ಮುಂದುವರಿಸಿ ಡೆಲ್ಲಿ ಬೌಲರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅವರು ಕೇವಲ 38 ಎಸೆತಗಳಲ್ಲಿ 63 ರನ್ ಗಳಿಸಿ ಆರ್‌.ಸಿ.ಬಿ ಪರ ಗರಿಷ್ಠ ಮೊತ್ತ ದಾಖಲಿಸಿದರು. ಅವರ ಇನ್ನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ಗಳಿದ್ದವು. ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ 14 ರನ್, ಕೃನಾಲ್ ಪಾಂಡ್ಯ 12 ರನ್ ಗಳಿಸಿದರೆ, ಕೊನೆಯಲ್ಲಿ ಟಿಮ್ ಡೇವಿಡ್ 17 ಎಸೆತಗಳಲ್ಲಿ 26 ರನ್ ಸಿಡಿಸಿ ತಂಡದ ಮೊತ್ತವನ್ನು 175ಕ್ಕೆ ತಲುಪಿಸಿದರು.

ಡೆಲ್ಲಿ ಪರ ಎನ್ಗಿಡಿ, ಕುಲದೀಪ್ ಯಾದವ್ ಮತ್ತು ನಾಯಕ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದು ಆರ್‌.ಸಿ.ಬಿ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಮುಕೇಶ್ ಕುಮಾರ್ ಒಂದು ವಿಕೆಟ್ ಪಡೆದರು. ಹೆಚ್ಚುವರಿಯಾಗಿ ಡೆಲ್ಲಿ ತಂಡ ಲೆಗ್ ಬೈ, ನೋಬಾಲ್ ಮತ್ತು ವೈಡ್ ಮೂಲಕ 11 ರನ್ ನೀಡಿತು.

176 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. 2.5 ಓವರ್ಗಳಲ್ಲಿ ಕೇವಲ 18 ರನ್ ಗಳಿಸುವಷ್ಟರಲ್ಲಿ ತಂಡ ಮೂರು ಪ್ರಮುಖ ವಿಕೆಟ್ ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ ಆರಂಭದಲ್ಲೇ ಪಥುಮ್ ನಿಸ್ಸಾಂಕ, ಕರುಣ್ ನಾಯರ್ ಮತ್ತು ಸಮೀರ್ ರಿಜ್ವಿ ವಿಕೆಟ್ ಪಡೆದು ಆರ್ಸಿಬಿಗೆ ಭರವಸೆ ಮೂಡಿಸಿದರು.

ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಇಬ್ಬರೂ ನಾಲ್ಕನೇ ವಿಕೆಟ್ಗೆ 44 ಎಸೆತಗಳಲ್ಲಿ 69 ರನ್ಗಳ ಅಮೂಲ್ಯ ಜೊತೆಯಾಟ ನೀಡಿ ಡೆಲ್ಲಿಯನ್ನು ಮತ್ತೆ ಸ್ಪರ್ಧೆಗೆ ತಂದರು. ಕೆಎಲ್ ರಾಹುಲ್ ಕೇವಲ 34 ಎಸೆತಗಳಲ್ಲಿ 57 ರನ್ ಸಿಡಿಸಿ ಉತ್ತಮ ಲಯದಲ್ಲಿದ್ದಾಗ, ಸಿಕ್ಸರ್ ಹೊಡೆಯಲು ಹೋಗಿ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಅವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳಿದ್ದವು.

ನಾಯಕ ಅಕ್ಷರ್ ಪಟೇಲ್ 19 ಎಸೆತಗಳಲ್ಲಿ 26 ರನ್ ಗಳಿಸಿ ಉತ್ತಮ ಆಟವಾಡಿದರೂ, ಗಾಯಗೊಂಡು ಮೈದಾನ ತೊರೆಯಬೇಕಾಯಿತು. ಆದರೆ ಟ್ರಿಸ್ಟನ್ ಸ್ಟಬ್ಸ್ ಒಂದು ತುದಿಯಲ್ಲಿ ಶಾಂತ ಹಾಗೂ ಸಮರ್ಥ ಆಟ ಮುಂದುವರಿಸಿದರು. ಅವರು ಕೊನೆಯಲ್ಲಿ ಡೇವಿಡ್ ಮಿಲ್ಲರ್ ಜೊತೆಗೂಡಿ ಪಂದ್ಯವನ್ನು ಸಂಪೂರ್ಣವಾಗಿ ಡೆಲ್ಲಿಯತ್ತ ತಿರುಗಿಸಿದರು.

ಕೊನೆಯ ನಾಲ್ಕು ಓವರ್ಗಳಲ್ಲಿ ಡೆಲ್ಲಿಗೆ 41 ರನ್ ಅಗತ್ಯವಿತ್ತು. ಹ್ಯಾಜಲ್ವುಡ್ ಎಸೆದ 17ನೇ ಓವರ್ನಲ್ಲಿ ಕೇವಲ 4 ರನ್ ಬಂದವು. ಬಳಿಕ ಭುವನೇಶ್ವರ್ ಕುಮಾರ್ ಎಸೆದ 18ನೇ ಓವರ್ನಲ್ಲಿ 12 ರನ್ ಸಿಕ್ಕಿತು. ರಸಿಕ್ ಧಾರ್ ಎಸೆದ 19ನೇ ಓವರ್ನಲ್ಲಿ ಡೆಲ್ಲಿ 10 ರನ್ ಕಲೆಹಾಕಿತು.

ಕೊನೆಯ ಓವರ್ನಲ್ಲಿ ಗೆಲುವಿಗೆ 15 ರನ್ ಬೇಕಾಗಿತ್ತು. ರೊಮಾರಿಯೋ ಶೆಫರ್ಡ್ ಎಸೆದ ಮೊದಲ ಎರಡು ಎಸೆತಗಳಲ್ಲಿ ಕೇವಲ ಎರಡು ರನ್ ಬಂದವು. ಆದರೆ ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಡೇವಿಡ್ ಮಿಲ್ಲರ್ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಡೆಲ್ಲಿಯ ಪರ ತಿರುಗಿಸಿದರು. ಐದನೇ ಎಸೆತದಲ್ಲಿ ಬೌಂಡರಿ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಟ್ರಿಸ್ಟನ್ ಸ್ಟಬ್ಸ್ 47 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ ಕೇವಲ 10 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ 19.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ ಟೂರ್ನಿಯಲ್ಲಿ ಮೂರನೇ ಜಯ ದಾಖಲಿಸಿತು.

ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದ್ದು, ಮಧ್ಯಮ ಕ್ರಮಾಂಕದ ವೈಫಲ್ಯ ಹಾಗೂ ಕೊನೆಯ ಓವರ್ಗಳಲ್ಲಿ ಬೌಲರ್ಗಳ ದುರ್ಬಲ ಪ್ರದರ್ಶನ ತಂಡಕ್ಕೆ ದುಬಾರಿಯಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande