
ನವದೆಹಲಿ, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಈ ವರ್ಷ ಮಾಜಿ ಪ್ರಧಾನಿ ಶ್ರೀ ಚಂದ್ರಶೇಖರ್ ಜಿ ಅವರ 100ನೇ ಜನ್ಮ ದಿನಾಚರಣೆಯ ಆರಂಭವಾಗಿದೆ. ಸಮೃದ್ಧ ಹಾಗೂ ನ್ಯಾಯಯುತ ಭಾರತದ ಅವರ ಕನಸನ್ನು ನನಸಾಗಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಇದು ಒಂದು ಮಹತ್ವದ ಸಂದರ್ಭವಾಗಿದೆ” ಎಂದು ತಿಳಿಸಿದ್ದಾರೆ.
ಚಂದ್ರಶೇಖರ್ ಅವರನ್ನು ಧೈರ್ಯ, ನಂಬಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧತೆಯಿಂದ ಕೂಡಿದ ಸಾಮೂಹಿಕ ನಾಯಕನಾಗಿ ಸ್ಮರಿಸಿದ ಪ್ರಧಾನಿ, ಅವರು ಭಾರತದ ಮಣ್ಣಿನಲ್ಲಿ ಆಳವಾಗಿ ಬೇರೂರಿದ್ದ ಹಾಗೂ ಸಾಮಾನ್ಯ ನಾಗರಿಕರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿದ್ದ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.
“ಸಾರ್ವಜನಿಕ ಜೀವನದಲ್ಲಿ ಸರಳತೆ ಮತ್ತು ಸ್ಪಷ್ಟತೆಯನ್ನು ತುಂಬಿದ ಚಂದ್ರಶೇಖರ್ ಜಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ದೊರೆತಿತ್ತು. ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಅವರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡ ಸಂದರ್ಭಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ” ಎಂದು ಮೋದಿ ಹೇಳಿದ್ದಾರೆ.
ಇದಲ್ಲದೆ, ಭಾರತದ ಯುವಕರು ಚಂದ್ರಶೇಖರ್ ಅವರ ಆಲೋಚನೆಗಳು, ತತ್ವಗಳು ಹಾಗೂ ದೇಶದ ಪ್ರಗತಿಗಾಗಿ ಅವರು ಮಾಡಿದ ಪ್ರಯತ್ನಗಳ ಕುರಿತು ಹೆಚ್ಚು ಹೆಚ್ಚು ಓದಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa