
ನವದೆಹಲಿ, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯ ಸಭೆಯ ಉಪಸಭಾಪತಿಯಾಗಿ ಹರಿವಂಶ್ ಅವರು ಸತತ ಮೂರನೇ ಅವಧಿಗೆ ಶುಕ್ರವಾರ ಮರು ಆಯ್ಕೆಯಾಗಿದ್ದಾರೆ. ಪ್ರತಿಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದರೊಂದಿಗೆ, ರಾಜ್ಯಸಭೆಯ ಉಪಸಭಾಪತಿ ಹುದ್ದೆಯನ್ನು ಸತತ ಮೂರು ಅವಧಿಗಳ ಕಾಲ ಅಲಂಕರಿಸಿದ ಕೆಲವೇ ಸದಸ್ಯರ ಪೈಕಿ ಹರಿವಂಶ್ ಒಬ್ಬರಾಗಿದ್ದಾರೆ.
ಸದನದ ಕಲಾಪ ಆರಂಭವಾದ ನಂತರ ಸದನದ ನಾಯಕ ಜಗತ್ ಪ್ರಕಾಶ್ ನಡ್ಡಾ ಹಾಗೂ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹರಿವಂಶ್ ಅವರನ್ನು ವೇದಿಕೆಯ ಬಳಿಗೆ ಕರೆದುಕೊಂಡು ಹೋಗಿ ಉಪಸಭಾಪತಿಗಳ ಕುರ್ಚಿಯಲ್ಲಿ ಕೂರಿಸಿದರು.
ಮರು ಆಯ್ಕೆಯಾದ ಹರಿವಂಶ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ, ಮೇಲ್ಮನೆಯ ನಿರ್ವಹಣೆಯಲ್ಲಿ ಅವರ ಅನುಭವ ಹಾಗೂ ಕೊಡುಗೆಯನ್ನು ಶ್ಲಾಘಿಸಿದರು.
ಇನ್ನೊಂದೆಡೆ, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಹರಿವಂಶ್ ಅವರಿಗೆ ಶುಭಾಶಯ ತಿಳಿಸಿ, ಸದನದಲ್ಲಿ ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶ ದೊರೆಯುವಂತೆ ಅವರು ನಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಲೋಕಸಭೆಯ ಉಪಸಭಾಧ್ಯಕ್ಷರ ಹುದ್ದೆ ದೀರ್ಘಕಾಲದಿಂದ ಖಾಲಿ ಇರುವ ವಿಚಾರವನ್ನೂ ಖರ್ಗೆ ಪ್ರಸ್ತಾಪಿಸಿದರು. 2019ರಿಂದ ಈ ಸಾಂವಿಧಾನಿಕ ಹುದ್ದೆ ಖಾಲಿ ಇರುವುದರಿಂದ ಅದು ಪ್ರಜಾಸತ್ತಾತ್ಮಕ ಸಂಪ್ರದಾಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಉಪಸಭಾಪತಿಯಾಗಿ ಹರಿವಂಶ್ ಅವರು ಪ್ರತಿಪಕ್ಷಗಳಿಗೆ ಸಮರ್ಪಕ ಸಮಯ ಹಾಗೂ ಗೌರವ ನೀಡಲಿದ್ದಾರೆ ಎಂಬ ನಿರೀಕ್ಷೆಯನ್ನು ಖರ್ಗೆ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ಸದಸ್ಯರು ಕೂಡ ಹರಿವಂಶ್ ಅವರಿಗೆ ಶುಭ ಹಾರೈಸಿ, ಸದನದ ಘನತೆ ಮತ್ತು ಸಂಸದೀಯ ಪರಂಪರೆಯನ್ನು ಕಾಪಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa