

ಮಂಡ್ಯ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ನೂತನವಾಗಿ ನಿರ್ಮಿಸಲಾದ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, “ರಾಗಿ ಮುದ್ದೆ ಕೇವಲ ಆಹಾರವಲ್ಲ, ಅದು ಶಕ್ತಿ. ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕು” ಎಂದು ಕರೆ ನೀಡಿದರು.
“ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಗಿ ಮುದ್ದೆಯನ್ನು ಜನಪ್ರಿಯಗೊಳಿಸಿದ್ದಾರೆ. ಉತ್ತಮ ಆಹಾರ ಪದ್ಧತಿ, ಯೋಗ ಮತ್ತು ನಿಯಂತ್ರಿತ ಜೀವನಶೈಲಿ ಆರೋಗ್ಯಕರ ಬದುಕಿಗೆ ಅಗತ್ಯ” ಎಂದು ಹೇಳಿದರು. ಜೊತೆಗೆ, ಅಡುಗೆ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡಬೇಕು ಎಂಬ ತಮ್ಮ ಹಿಂದಿನ ಸಲಹೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದರು.
ಆದಿಚುಂಚನಗಿರಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಾತನಾಡಿದ ಮೋದಿ, ಕರ್ನಾಟಕದ ಆಧ್ಯಾತ್ಮಿಕತೆ ಮತ್ತು ತಂತ್ರಜ್ಞಾನದ ಮಿಶ್ರಣವನ್ನು ಕೊಂಡಾಡಿದರು. “ಕರ್ನಾಟಕದ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ಇಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ. ಕಳೆದ ಎರಡು ಸಾವಿರ ವರ್ಷಗಳಿಂದ ಆದಿಚುಂಚನಗಿರಿ ಮಠವು ಭಾರತದ ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಜೀವಂತವಾಗಿರಿಸಿದೆ” ಎಂದು ಹೇಳಿದರು.
ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸ್ಮರಿಸಿದ ಪ್ರಧಾನಿ, ಅವರು ಕೇವಲ ಸಂತನಲ್ಲ, ಸಮಾಜದ ಬಂಧುವಾಗಿದ್ದರು ಎಂದು ಹೇಳಿದರು. “ಗ್ರಾಮೀಣ ಯುವಕರ ಕನಸುಗಳಿಗೆ ದಾರಿ ತೋರಿದ ಅವರು, ಬಡ ಮಕ್ಕಳಿಗೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ದೊರಕುವಂತೆ ಮಾಡಿ ಶೈಕ್ಷಣಿಕ ಕ್ರಾಂತಿಗೆ ಕಾರಣರಾದರು” ಎಂದು ಶ್ಲಾಘಿಸಿದರು.
ಸ್ವಾಮೀಜಿಯವರ ಪರಿಸರ ಪ್ರೇಮವನ್ನು ಉಲ್ಲೇಖಿಸಿದ ಮೋದಿ, “ನವಿಲುಗಳ ಸಂರಕ್ಷಣೆಗಾಗಿ ಅವರು ನಡೆಸಿದ ಸಾಮಾಜಿಕ ಚಳವಳಿ ಇಂದಿಗೂ ಮಾದರಿಯಾಗಿದೆ. ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ” ಎಂದು ಹೇಳಿದರು.
ಮಠದ ಸಮಾಜಮುಖಿ ಸೇವೆಗಳ ಬಗ್ಗೆ ಮಾತನಾಡಿದ ಅವರು, “ಅನ್ನ, ಅಕ್ಷರ, ಆರೋಗ್ಯ, ಅಧ್ಯಾತ್ಮ, ಆಶ್ರಯ, ಅರಣ್ಯ, ಅನುಕಂಪ, ಗೋಸಂರಕ್ಷಣೆ ಹಾಗೂ ಸ್ವಚ್ಛತೆ ಕ್ಷೇತ್ರಗಳಲ್ಲಿ ಮಠ ನೀಡುತ್ತಿರುವ ಸೇವೆ ಅಪಾರವಾಗಿದೆ. ಈ ಮಠವು ಸ್ವದೇಶಿ ಮತ್ತು ಆತ್ಮನಿರ್ಭರತೆಯ ಸಂಕೇತವಾಗಿದೆ” ಎಂದು ಹೇಳಿದರು. ಇದೇ ವೇಳೆ, ಕೇಂದ್ರ ಸರ್ಕಾರದ ಆಯುಷ್ಮಾನ ಭಾರತ ಯೋಜನೆಯಡಿ ಬಡವರಿಗೆ ಉಚಿತ ಚಿಕಿತ್ಸೆ ದೊರೆಯುತ್ತಿರುವುದನ್ನು ಉಲ್ಲೇಖಿಸಿ, ಮಠದ ಸೇವಾ ಮನೋಭಾವ ಮತ್ತು ಸರ್ಕಾರದ ಆಶಯ ಒಂದೇ ದಾರಿಯಲ್ಲಿ ಸಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಗುರು ಭೈರವೈಕ್ಯ ಮಂದಿರದ ಮಾಹಿತಿ:
ಇಂದು ಉದ್ಘಾಟನೆಗೊಂಡ ‘ಶ್ರೀ ಗುರು ಭೈರವೈಕ್ಯ ಮಂದಿರ’ವು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥ ನಿರ್ಮಿಸಲಾದ ಭವ್ಯ ಸ್ಮಾರಕವಾಗಿದೆ. ಇದೇ ಸ್ಥಳದಲ್ಲಿ ಅವರು 2013ರ ಜನವರಿ 13ರಂದು ಲಿಂಗೈಕ್ಯರಾದರು. ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾದ ಈ ಮಂದಿರವು ಸಾಂಪ್ರದಾಯಿಕ ದ್ರಾವಿಡ ವಾಸ್ತುಶಿಲ್ಪ ಶೈಲಿಯ ಅದ್ಭುತ ನಿದರ್ಶನವಾಗಿದೆ.
ಮಂದಿರದ ಗರ್ಭಗುಡಿಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಅಮೃತಶಿಲೆಯ ಭವ್ಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಸೂಕ್ತವಾದ ಪ್ರಶಾಂತ ವಾತಾವರಣವನ್ನು ಇದು ಹೊಂದಿದೆ. ಭಕ್ತರಿಗೆ ಇದು ಕೇವಲ ಸಮಾಧಿ ಸ್ಥಳವಲ್ಲ, ಗುರುಗಳ ದಿವ್ಯ ಚೇತನ ಸದಾ ಜಾಗೃತವಾಗಿರುವ ಶಕ್ತಿ ಕೇಂದ್ರವಾಗಿದೆ.
ಸಮಾರಂಭದಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಜಂಟಿಯಾಗಿ ಸೌಂದರ್ಯ ಲಹರಿ ಮತ್ತು ಶಿವ ಮಹಿಮ್ನಾ ಸ್ತೋತ್ರಮ್ ಗ್ರಂಥಗಳನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ನೇತೃತ್ವವನ್ನು ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa