
ವಿಜಯಪುರ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಗ ತನ್ನಂತೆ ಕಾಣುವುದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪಾಪಿ ತಂದೆಯೊಬ್ಬ ತನ್ನದೇ ಹೆತ್ತ ಮಗನನ್ನು ಕೊಲೆ ಮಾಡಿದ ಮನಕಲಕುವ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ ಅರಿಕೇರಿ ಎಂಬಾತ ತನ್ನ 6 ವರ್ಷದ ಮಗ ಕೃಷ್ಣಾನನ್ನು ಮಹಾರಾಷ್ಟ್ರದ ಕರಾಡ್ ಭಾಗದ ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಗ್ರಾಮದ ಕೆಲವರು “ಮಗ ನಿನ್ನಂತೆ ಕಾಣುತ್ತಿಲ್ಲ” ಎಂದು ತಮಾಷೆ ಮಾಡಿದ ಹಿನ್ನೆಲೆ ಕೋಪಗೊಂಡ ಆತ, ಮಗನನ್ನು ಶಾಲೆಗೆ ಸೇರಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಮಗ ಕಾಣೆಯಾಗಿದ್ದರಿಂದ ತಾಯಿ ಆತಂಕಗೊಂಡು ವಿಚಾರಿಸಿದಾಗ, ಮೊದಲಿಗೆ ವಿಷಯ ಮುಚ್ಚಿಟ್ಟಿದ್ದ ಆರೋಪಿ ಬಳಿಕ ಭಯದಿಂದ ಊರು ಬಿಟ್ಟು ಪರಾರಿಯಾಗಿದ್ದನು. ಮೂರು ದಿನಗಳ ನಂತರ ಬಾಲಕನ ಶವ ಪತ್ತೆಯಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ದುರ್ಘಟನೆ ತಿಳಿದ ಗ್ರಾಮಸ್ಥರು ಆರೋಪಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande