



ಕೊಪ್ಪಳ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸರ್ವರಿಗೂ ಸಮಾನ ಅವಕಾಶಗಳನ್ನು ಸಿಗುವಂತಹ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಕಲ್ಪಿಸಿಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸರ್ವರಿಗೂ ಶಕ್ತಿಯಾಗಿದ್ದಾರೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 14ರಂದು ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಸಮಾನತೆಯಿಂದ ಕೂಡಿದ್ದ ನಮ್ಮ ದೇಶದಲ್ಲಿ ಸಮಾನತೆಯನ್ನು ತರಲು ಹಾಗೂ ಮೇಲು-ಕೀಳು, ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ದೇಶದಲ್ಲಿ ಸಮ ಸಮಾಜವನ್ನು ನಿರ್ಮಿಸಲು ಡಾ. ಬಿ.ಆರ್. ಅಂಬೇಡ್ಕರ್ ರವರು ಹಲವಾರು ಹೋರಾಟ, ಚಳುವಳಿಗಳ ಮೂಲಕ ಶ್ರಮಿಸಿದ್ದಾರೆ. ಹಿಂದುಳಿದವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಬದುಕನ್ನು ಕಟ್ಟಿಕೊಳ್ಳಲು ಅವರು ರಚಿಸಿದ ಸಂವಿಧಾನವು ನಮ್ಮೆಲ್ಲರಿಗೆ ಒಂದು ಶಕ್ತಿಯಾಗಿದೆ. ಅಂಬೇಡ್ಕರ್ ಎಂದರೇ, ಒಂದು ಚಳುವಳಿ, ಸಮಾನತೆ, ಸಮಾನತೆಯ ಬದುಕು ಕಟ್ಟಿಕೊಟ್ಟವರು. ಅವರು ಎಲ್ಲಾ ವರ್ಗದವರಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ನೀಡಿದ್ದಾರೆ. ಇದನ್ನು ನಾವುಗಳು ಸಂವಿಧಾನದ ಪೀಠಿಕೆ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಇಂತಹ ಸಂವಿಧಾನದ ಪೀಠಿಕೆ ಪ್ರಸ್ತಾವನೆಯ ಸ್ಮಾರಕವನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ಇಂದು ಅನಾವರಣ ಮಾಡಲಾಗಿದ್ದು, ಸಂತೋಷದ ವಿಚಾರವಾಗಿದೆ ಎಂದರು.
ಅಂಬೇಡ್ಕರ್ ಅವರ ಜನನವು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದಲ್ಲಿ ಆದರೂ ಸಹ ಅವರು ತಮ್ಮ ಜ್ಞಾನದ ಮೂಲಕ ಮುಂದುವರಿದು ಹಲವಾರು ಪದವಿಗಳನ್ನು ಪಡೆದು, ಕಾನೂನು ಮತ್ತು ಆರ್ಥಿಕ ತಜ್ಞರಾಗಿ, ನಮ್ಮ ದೇಶದ ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಶ್ರಮಿಸಿ ನಮ್ಮ ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಇದರ ಫಲವಾಗಿ ಎಲ್ಲರಿಗೂ ಸಾಮಾಜಿಕ ಶಿಕ್ಷಣ, ನ್ಯಾಯ ಮತ್ತು ಸಮಾಜಿಕ ಸ್ವಾತಂತ್ರ್ಯತೆ ಸಿಕ್ಕಿದೆ. ಇಂದು ನಮ್ಮಂತಹ ಜನಪ್ರತಿನಿಧಿಗಳು, ಗ್ರಾ.ಪಂ., ತಾ.ಪಂ., ಜಿ.ಪಂ ಮತ್ತು ಸ್ಥಳೀಯ ನಗರ ಸಂಸ್ಥೆಗಳ ಸದಸ್ಯರು ಹಾಗೂ ಶಾಸಕರು, ಸಂಸದರಾಗಲು ಸಂವಿಧಾನವೇ ಕಾರಣವಾಗಿದೆ. ಇಂತಹ ಮಹಾನ ಚೇತನರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ತೀವ್ರ ಶೋಷಣೆಯ ಕಾಲದಲ್ಲಿ ಉನ್ನತ ಶಿಕ್ಷಣ ಪಡೆದವರು. ಅಂಬೇಡ್ಕರ್ ಅವರು ನಮಗೆ ಹೋರಾಟ ಮಾಡುವಂತಹ ಮಾರ್ಗಗಳನ್ನು ನೀಡಿದ್ದಾರೆ. ನಾವು ಅವುಗಳನ್ನು ಪಾಲಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದ ಆಶಯಗಳ ಮೇಲೆ ದೇಶವನ್ನು ಕಟ್ಟಿದರು. ಅದೇ ರೀತಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ ಶ್ರಮ ದೇಶದ ಆಹಾರ ಭದ್ರತೆಗೆ ಭದ್ರ ಬುನಾದಿ ಹಾಕಿದೆ. ಈ ಇಬ್ಬರೂ ಮಹಾನ್ ಚೇತನಗಳ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ರವರ ಮಹಿಳೆಯರಿಗೆ ಸಮಾನತೆ, ವಾರಸುದಾರಿಕೆಯ ಹಕ್ಕನ್ನು ನೀಡಿದ್ದಾರೆ. ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀಯವರು ನಾರಿ ಶಕ್ತಿ ಬಿಲ್ ಜಾರಿಗೆ ತರವ ಮೂಲಕ ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 30ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ. ನಾವೆಲ್ಲರೂ ಅಂಬೇಡ್ಕರ್ ರವರ ಚಿಂತನೆ-ವಿಚಾರಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ ಅವರು ಮಾತನಾಡಿ, ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಹೊಂದಿದ ನಂತರ ಭಾರತ ದೇಶದಲ್ಲಿ ನಮ್ಮದೇ ಸಂವಿಧಾನ ಇರಲಿಲ್ಲ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ತರುವ ಧ್ಯೇಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಕರಡು ರಚನಾ ಸಮಿತಿಯನ್ನು ರಚಿಸಲಾಯಿತು. ಜಗತ್ತಿನ ಎಲ್ಲ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ ನಂತರ ಅಂಬೇಡ್ಕರ್ ಅವರು ಬೃಹತ್ ಸಂವಿಧಾನವನ್ನು ರಚಿಸಲು ಸುಮಾರು 2 ವರ್ಷ 11 ತಿಂಗಳು 18 ದಿವಸ ತೆಗೆದುಕೊಂಡರು. 11 ಅಧಿವೇಶನಗಳ ನಂತರ 1949 ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. 1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. ಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ನಮ್ಮ ಸಂವಿಧಾನವು ಸಮಾನತೆ, ಭ್ರಾತೃತ್ವ, ವ್ಯಕ್ತಿಗೌರವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಳಗೊಂಡಿದ್ದು, ಜಗತ್ತಿನ ಎಲ್ಲ ಸಂವಿಧಾನಗಳಿಗಿ0ತ ಶ್ರೇಷ್ಠ ಮೌಲ್ಯಗಳನ್ನು ನಮ್ಮ ಸಂವಿಧಾನ ಹೊಂದಿದೆ. ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಅರಿತು ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ರಾಮಸಾಗರದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ್ ಅವರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಕುರಿತು ವಿಶೇಷ ಉಪನ್ಯಾಸ ನೀಡಿ, ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು 60ಕ್ಕೂ ಅಧಿಕ ದೇಶಗಳ ಸಂವಿಧಾನಗಳನ್ನು ಅರಿತು, ಅಧ್ಯಯನ ಮಾಡಿ, ನಮ್ಮ ದೇಶದ ಸಂವಿಧಾನವನ್ನು ರೂಪಿಸಿ, ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಹಲವಾರು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಆದರೆ, ಆ ಸ್ವಾತಂತ್ರವನ್ನು ಹೇಗೆ ಅನುಭವಿಸಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ತಿಳಿಸಿಕೊಟ್ಟಿದ್ದಾರೆ. ದೇಶದ ಮೊಟ್ಟ ಮೊದಲ ಕಾನೂನು ಮಂತ್ರಿಯಾದ ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಕಾಯ್ದೆ ಮೂಲಕ ಹೆಣ್ಣುಮಕ್ಕಳ ರಕ್ಷಣೆಗಾಗಿ, ಅವರ ಮಹತ್ತರ ಹಕ್ಕುಗಳನ್ನು ರಕ್ಷಿಸಲು ಹೋರಾಡಿದರು. ಬಾಲ್ಯವಿವಾಹ, ವಿಚ್ಚೇದನ, ರಾಜಕೀಯ ಸಮಾನತೆ, ಆಸ್ತಿ ಸಮಾನತೆ ಹಕ್ಕು ಹೀಗೆ ಅನೇಕ ರೀತಿಯ ಪ್ರಮುಖ ಅಂಶಗಳನ್ನು ಹಿಂದೂ ಕೋಡ್ ಬಿಲ್ ಕಾಯ್ದೆ ಮೂಲಕ ಜಾರಿಗೊಳಿಸಿ ಮಹಿಳೆಯರು ಪುರುಷರಷ್ಟೇ ಸಮಾನರು ಹಾಗೂ ಕಾನೂನು ಎಲ್ಲರಿಗೂ ಸಮಾನವೆಂದು ಸಾರಲು ಮುಂದಾದರು ಎಂದು ತಿಳಿಸಿದರು.
ಸಂವಿಧಾನ ಪೀಠಿಕೆಯ ವಾಚನ : ಕಾರ್ಯಕ್ರಮ ಅಂಗವಾಗಿ ಸಂವಿಧಾನ ಪೀಠಿಕೆಯ ವಾಚನ ಮಾಡಲಾಯಿತು. ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅಜ್ಜಪ್ಪ ಸೋಗಲದ ಅವರು ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ಬೋಧಿಸಿದರು.
ಗಮನ ಸೆಳೆದ ಕ್ರಾಂತಿ ಗೀತೆಗಳ ಗಾಯನ : ಕಾರ್ಯಕ್ರಮದಲ್ಲಿ ಮಂಜುನಾಥ ಅಳ್ಳಳ್ಳಿ ಮತ್ತು ಸಂಗಡಿಗರು ಹಾಡಿದ ಡಾ.ಬಿ.ಆರ್.ಅಂಬೇಡ್ಕರ್ ರವರ ಕುರಿತಾದ ಕ್ರಾಂತಿ ಗೀತೆಗಳು ಎಲ್ಲರ ಗಮನ ಸೆಳೆದವು.
ಸನ್ಮಾನ : ಡಾ. ಬಿ.ಆರ್ ಅಂಬೇಡ್ಕರ ಅವರ ಜನ್ಮ ದಿನಾಚರಣೆ ನಿಮಿತ್ತ ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿ ನಿರ್ಮಿಸಲಾದ ಭಾರತ ಸಂವಿಧಾನದ ಪ್ರಸ್ತಾವನೆಯ ಶಿಲಾ ಸ್ಮಾರಕ ನಿರ್ಮಿಸಿದ ಪ್ರಯುಕ್ತ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್. ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಲಾದ ಟಿ.ಕೃಷ್ಣಮೂರ್ತಿ, ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪುಷ್ಪಲತಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಗದೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ನಾಗಮಣಿ ಹೊಸಮನಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಸಮಾಜದ ಮುಖಂಡರಾದ ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ, ಮುತ್ತುರಾಜ ಕುಷ್ಟಗಿ, ಯಲ್ಲಪ್ಪ ಬಳಗಾನೂರ, ಸಿದ್ರಾಮ ಹೊಸಮನಿ, ಚನ್ನಬಸಪ್ಪ ಹೊಳೆಯಪ್ಪನವರ, ಗವಿಸಿದ್ದಪ್ಪ ಗಿಣಿಗೇರಿ, ಸಿದ್ದು ಮ್ಯಾಗೇರಿ ಸೇರಿದಂತೆ ಸಮಾಜದ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆ : ಕಾರ್ಯಕ್ರಮದ ನಿಮಿತ್ತ ಬೆಳಿಗ್ಗೆ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರದ ಮೆರವಣಿಗೆಯು ಕೊಪ್ಪಳ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ನಿಂದ ಆರಂಭಗೊ0ಡು ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಇದರಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ, ಸಾರ್ವಜನಿಕರ ಗಮನ ಸೆಳೆದವು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್