
ವಾಷಿಂಗ್ಟನ್, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅಮೆರಿಕ ಸೇನೆಯ ಸೆಂಟ್ಕಾಮ್ ಪಡೆ ಇರಾನ್ ಬಂದರುಗಳ ಸುತ್ತಮುತ್ತ ದಿಗ್ಬಂಧನ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂಬ ತಿಳಿಸಿದೆ. ಈ ನಡುವೆ, ಇರಾನ್ನ ಐಆರ್ಜಿಸಿ ಹಾರ್ಮುಜ್ ಜಲಸಂಧಿ ನಾಗರಿಕ ಹಡಗುಗಳಿಗೆ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದೆ.
ಸೆಂಟ್ಕಾಮ್ ನೀಡಿದ ಮಾಹಿತಿಯ ಪ್ರಕಾರ, ಏಪ್ರಿಲ್ 13ರಂದು ಬೆಳಿಗ್ಗೆ 10 ಗಂಟೆಯಿಂದ ಇರಾನ್ ಬಂದರುಗಳ ಒಳಗೆ ಹಾಗೂ ಹೊರಗೆ ಸಾಗುವ ಸಮುದ್ರ ಸಂಚಾರದ ಮೇಲೆ ನಿರ್ಬಂಧ ಹೇರಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕ್ರಮವು ಅರಬ್ಬೀ ಸಮುದ್ರ ಹಾಗೂ ಒಮಾನ್ ಕೊಲ್ಲಿಯ ಭಾಗಗಳಿಗೂ ಅನ್ವಯಿಸಬಹುದು ಎಂದು ಹೇಳಲಾಗಿದೆ. ಅಲ್ಲದೆ, ನೌಕಾಯಾನದಲ್ಲಿ ತೊಡಗಿರುವ ಹಡಗುಗಳಿಗೆ ನಿರ್ದಿಷ್ಟ ಸಂವಹನ ಮಾರ್ಗಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ದೊರೆತಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಐಆರ್ಜಿಸಿ ಪ್ರಕಟಣೆ ಹೊರಡಿಸಿ, ಹಾರ್ಮುಜ್ ಜಲಸಂಧಿಯ ಮೂಲಕ ನಾಗರಿಕ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದೆ. ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸುವ ಹಡಗುಗಳಿಗೆ ಸುರಕ್ಷಿತ ಸಂಚಾರ ಅವಕಾಶ ನೀಡಲಾಗುವುದು ಎಂದು ಹೇಳಿದೆ. ಆದರೆ, ಮಿಲಿಟರಿ ಹಡಗುಗಳು ಪ್ರವೇಶಿಸಿದಲ್ಲಿ ಅದನ್ನು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಈ ನಡುವೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಈ ಕ್ರಮ ಜಾರಿಯಾಗಲಿದೆ ಎಂಬ ವರದಿಗಳು ಹೊರಬಂದಿದ್ದರೂ, ಇದಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ಮತ್ತು ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ. ಬ್ರಿಟನ್ ಸೇರಿದಂತೆ ಮಿತ್ರ ರಾಷ್ಟ್ರಗಳು ಈ ಕ್ರಮದಲ್ಲಿ ನೇರ ಭಾಗಿಯಾಗಿಲ್ಲ ಎಂದು ಸೂಚಿಸಿರುವ ವರದಿಗಳೂ ಹೊರಬಿದ್ದಿವೆ.
ಜಾಗತಿಕ ತೈಲ ಸಾಗಣೆಗೆ ಪ್ರಮುಖ ದ್ವಾರವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಸೈನಿಕ ಉದ್ವಿಗ್ನತೆ ಉಂಟಾದಲ್ಲಿ, ಅದರ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೂ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಈ ಬೆಳವಣಿಗೆಗಳನ್ನು ಅಂತಾರಾಷ್ಟ್ರೀಯ ಸಮುದಾಯ ಆತಂಕದಿಂದ ಗಮನಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa