
ಕೋಲಾರ, ೧೩ ಏಪ್ರಿಲ್ (ಹಿ.ಸ) :
ಆ್ಯಂಕರ್ : ದಿವಂಗತ ಟಿ.ಚೆನ್ನಯ್ಯ ಅವರ ಕನಸಿನ ಕೂಸಾದ ಗಾಂಧಿನಗರ ಸರ್ಕಾರಿ ಶಾಲೆಗೆ ೧೨ ಕೊಠಡಿಗಳುಳ್ಳ ಸುಂದರ ಹಾಗೂ ಸುಸಜ್ಜಿತವಾದ ಕಟ್ಟಡ ಸಿದ್ದಗೊಳ್ಳುತ್ತಿದ್ದು, ಇದರೊಂದಿಗೆ ಈ ಬಡಾವಣೆಯ ನೈರ್ಮಲ್ಯ ಕಾಪಾಡಿ,ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಇಲ್ಲಿನ ಯುವಕರು ತಮ್ಮೊ೦ದಿಗೆ ಕೈಜೋಡಿಸಬೇಕು ಎಂದು ಪೊಲೀಸ್ ಡಿಐಜಿಪಿ ಡಿ.ದೇವರಾಜ್ ಕರೆ ನೀಡಿದರು.
ಇಲ್ಲಿನ ಗಾಂಧಿನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿ ಅಂಗವಾಗಿ ಸೋಮವಾರ ಆರ್.ಎಲ್. ಜಾಲಪ್ಪ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯ, ಕೋಲಾರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಗಾಂಧೀಜಿಯವರು ಭೇಟಿ ನೀಡಿದ್ದರಿಂದಾಗಿ ಗಾಂಧಿನಗರವಾಗಿರುವ ಈ ಬಡಾವಣೆಯಲ್ಲಿನ ಸರ್ಕಾರಿ ಶಾಲೆ ಪಾಳು ಬಿದ್ದಂತಿತ್ತು, ಈ ಶಾಲೆಗೆ ಇತಿಹಾಸವಿದೆ, ಈ ಭಾಗದ ಯುವಕರು ಈ ಶಾಲೆಯನ್ನು ನನಗೆ ತೋರಿಸಿ ವಿಷಯ ತಿಳಿಸಿದರು. ನಾನು ಕೂಡಲೇ ಗಮನ ಹರಿಸಿ, ಸಂವಿಧಾನ ರಚನಾ ಸಮಿತಿಯಲ್ಲಿದ್ದ ಚೆನ್ನಯ್ಯರಂತಹ ಮಹನೀಯರು ಬೆಳೆದ ಜಾಗವಾದ ಈ ಶಾಲೆಯನ್ನು ಮಾದರಿಯಾಗಿಸುವ ಸಂಕಲ್ಪ ಮಾಡಿ, ಸಿಎಸ್ಆರ್ ನಿಧಿಯ ನೆರವು ಪಡೆದು ಸುಂದರ ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿದರು.
ಸುಂದರ ಶಾಲೆಯ ಜತೆಗೆ ಗ್ರಾಮ ನೈರ್ಮಲ್ಯವಿದ್ದರೆ ಮಾತ್ರವೇ ಉತ್ತಮ ಆರೋಗ್ಯ, ಕಲಿಕೆಗೆ ಪೂರಕ ವಾತಾವರಣ ಸೃಷ್ಟಿ ಸಾಧ್ಯವೆಂದ ಅವರು, ಹಣ ಅಧಿಕಾರ ಬರುತ್ತೆ,ಹೋಗುತ್ತೆ ಆದರೆ ಮಾಡಿದ ಕೆಲಸ ಶಾಶ್ವತವಾಗಿ ನಮ್ಮ ನೆನಪನ್ನು ಶಾಶ್ವತವಾಗಿ ಉಳಿಸುತ್ತದೆ ಎಂದ ಅವರು, ಅದಕ್ಕೆ ಟಿ.ಚನ್ನಯ್ಯ ಹುಟ್ಟಿ ಬೆಳೆದ ಈ ಬಡಾವಣೆಯನ್ನು ಮತ್ತಷ್ಟು ಸುಂದರಗೊಳಿಸೋಣ ನಾವಿರುವ ಊರು ಸ್ವಚ್ಚವಾಗಿದ್ದರೆ, ಶಾಂತಿ,ನೆಮ್ಮದಿಯೂ ಸಾಧ್ಯ, ನಾವು ದೇವಾಲಯಕ್ಕೆ ಏಕೆ ಹೋಗುತ್ತೇವೆ ಅಲ್ಲಿ ಸುಂದರ ವಾತಾವರಣವಿದೆ, ಭಕ್ತಿಯ ಭಾವನೆ ಬಲಗೊಳ್ಳುತ್ತದೆ, ಮಕ್ಕಳಿಗೆ ಕಲಿಕೆಯ ಪರಿಸರ ನಿರ್ಮಿಸುವ ಹೊಣೆ ಈ ಭಾಗದ ಪ್ರತಿಯೊಬ್ಬರದ್ದು ಆಗಿದೆ ಎಂದರು.
ಮಕ್ಕಳ ತಜ್ಞ ಡಾ.ಬೀರೇಗೌಡ ಮಾತನಾಡಿ, ಯಾರೇ ಮತ ಕೇಳಲು ಬಂದರೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವ ಭರವಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿ, ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರು ದೇಶದ ಸಾಮಾಜಿಕ ಆರೋಗ್ಯ ಕಾಪಾಡಲು ತಮ್ಮ ಬದುಕನ್ನೇ ಮೀಸಲಾಗಿಟ್ಟರು ಅಂತಹವರ ಹೆಸರಿನಲ್ಲಿ ಆರೋಗ್ಯ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿ, ಇದರ ಪ್ರಯೋಜನ ಈ ಭಾಗದ ಜನತೆ ಪಡೆದುಕೊಳ್ಳಲು ಕೋರಿದರು.
ಮಾಜಿ ನಗರಸಭಾ ಸದಸ್ಯ ಪ್ರವೀಣ್ ಗೌಡ ಮಾತನಾಡಿ, ಗಾಂಧಿನಗರದಲ್ಲಿ ಸೇವಾ ಕಾರ್ಯಕ್ರಮಗಳನ್ನು ಯಾರೇ ನಡೆಸಿದರೂ ತಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿ, ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನಾನ್ನಾದರೂ ಸಾಧಿಸಬಹುದು ಎಂದು ಅರಿತು ಪ್ರತಿಯೊಬ್ಬರು ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ನಾರಾಯಣ ಹೃದಯಾಲಯದ ಇಮ್ರಾನ್, ತಜ್ಞ ವೈದ್ಯರಾದ ಡಾ. ಎಂ. ಗೋವಿಂದರಾಜು, ಡಾ. ಮನೋಹರಗೌಡ, ಡಾ. ಬಿ.ಆರ್. ಶ್ರೀನಿವಾಸ್ ಸೇರಿದಂತೆ ವೈದ್ಯಕೀಯ ತಂಡವು ಸಾರ್ವಜನಿಕರಿಗೆ ಸಲಹೆ ಹಾಗೂ ಚಿಕಿತ್ಸೆ ನೀಡಿದ್ದು, ೫೦೦ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಉಚಿತ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್