
ಬೆಂಗಳೂರು, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇ-ಸ್ವತ್ತು ತಂತ್ರಾಂಶದ ಕಾರ್ಯನಿರ್ವಹಣೆ ಹಾಗೂ ಪ್ರಗತಿಯನ್ನು ಪರಿಶೀಲಿಸಿದರು.
ಇ-ಸ್ವತ್ತು 2.0 ತಂತ್ರಾಂಶದಡಿ ರಾಜ್ಯದಾದ್ಯಂತ ಈವರೆಗೆ 1,52,863 ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 1,33,803 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು. ಜೊತೆಗೆ, ಹೊಸ ನಮೂನೆ 11ಬಿ ಸಂಬಂಧಿಸಿದಂತೆ 76,093 ಅರ್ಜಿಗಳು ಬಂದಿದ್ದು, ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸಾರ್ವಜನಿಕರಿಂದ ಬಂದ ಅಹವಾಲುಗಳು ಹಾಗೂ ಸಲಹೆಗಳ ಆಧಾರದಲ್ಲಿ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಹಲವು ತಾಂತ್ರಿಕ ಸುಧಾರಣೆಗಳನ್ನು ಮಾಡಲಾಗಿದೆ.
ಪ್ರಮುಖವಾಗಿ:
ನಮೂನೆ–11ಬಿ ಖಾತೆಗಳನ್ನು ನಮೂನೆ–11ಎಗೆ ಪರಿವರ್ತಿಸಲು ಗ್ರಾಮ ಪಂಚಾಯತಿ ಹಂತದಲ್ಲೇ ಅವಕಾಶ ಕಲ್ಪಿಸಲಾಗಿದೆ.
ಹೊಸ ಅಪಾರ್ಟ್ಮೆಂಟ್ ಕಟ್ಟಡಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ವಿಸ್ತೀರ್ಣವನ್ನು ಗುಂಟೆ/ಸೆಂಟ್ಸ್ನಿಂದ ಚದರ ಮೀಟರ್ಗೆ ಪರಿವರ್ತಿಸಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಋಣಭಾರ ಪ್ರಮಾಣಪತ್ರ (ಇಸಿ) ಸಲ್ಲಿಕೆಯಲ್ಲಿ ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳು ನಿವಾರಿಸಲಾಗಿದೆ.
ಅರ್ಜಿಗಳನ್ನು ಸೇವ್ ಮಾಡುವ ಹಾಗೂ ಇ-ಖಾತೆಗಳನ್ನು ಡೌನ್ಲೋಡ್ ಮಾಡುವ ಸಮಸ್ಯೆಗಳು ಬಗೆಹರಿಸಲಾಗಿದೆ.
ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜನೆಯಲ್ಲಿ ಉಂಟಾಗಿದ್ದ ತೊಂದರೆಗಳನ್ನು ಸರಿಪಡಿಸಲಾಗಿದೆ.
ಗ್ರಾಮ ಪಂಚಾಯತಿ ಬಳಕೆದಾರರ ಲಾಗಿನ್ನಲ್ಲಿ ಅನುಮೋದನೆ ಸಂಬಂಧಿತ ಸಮಸ್ಯೆಗಳಿಗೂ ಪರಿಹಾರ ನೀಡಲಾಗಿದೆ.
ಇದಲ್ಲದೆ, ಹೊಸದಾಗಿ ಅನುಮೋದನೆಗೊಂಡ ಆಸ್ತಿಗಳ ತಿದ್ದುಪಡಿ ಅವಕಾಶ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರವನ್ನು ಇ-ಸ್ವತ್ತು ತಂತ್ರಾಂಶದೊಂದಿಗೆ ಸಂಯೋಜಿಸುವ ಕಾರ್ಯವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸಾರ್ವಜನಿಕರು ಅರ್ಜಿ ಸಲ್ಲಿಸುವ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ರಾಜ್ಯ ಸಹಾಯವಾಣಿ ಸಂಖ್ಯೆ 9483476000 ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa