
ನವದೆಹಲಿ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಐಟಿ ಸಿಟಿ ಬೆಂಗಳೂರಿನಿಂದ ವಾಣಿಜ್ಯನಗರಿ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸಂಪರ್ಕಕ್ಕೆ ಅನುಕೂಲವಾಗುವಂತೆ ನೂತನ ವಂದೇ ಭಾರತ್ ರೈಲು ಆರಂಭಿಸಲು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಸಲ್ಲಿಸಿ ಗಮನ ಸೆಳೆದಿದ್ದರು.
ಇದೀಗ ಕೇಂದ್ರ ಸರ್ಕಾರ, ಸಚಿವ ಜೋಶಿ ಅವರ ಮನವಿಗೆ ಸ್ಪಂದಿಸಿದ್ದು, ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಬೆಂಗಳೂರು-ಮುಂಬೈ ಮಧ್ಯೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ.
ಈ ನೂತನ ರೈಲು ಕೆ ಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಗೆ ಸಂಚರಿಸಲಿದೆ. ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ 'ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್' ರೈಲು ಕಲ್ಪಿಸುವಂತೆ ಸಚಿವ ಪ್ರಲ್ಹಾದ ಜೋಶಿ ಕೇಂದ್ರದ ಗಮನ ಸೆಳೆದಿದ್ದರು.
ಶೀಘ್ರವೇ ಈ ಸೂಪರ್ ಫಾಸ್ಟ್ ರೈಲು ಸಂಚಾರ ಪ್ರಾರಂಭಿಸಿ, ನಂತರದ ದಿನಗಳಲ್ಲಿ ಅದನ್ನು ವಂದೇ ಭಾರತ್ ಸ್ಲೀಪರ್ ರೈಲು' ಆಗಿ ಬದಲಾಯಿಸುವ ಜೋಶಿ ಅವರ ಪ್ರಸ್ತಾವನೆಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮನ್ನಣೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ:
ರಾಜ್ಯದ ಅಭಿವೃದ್ದಿ ಜತೆ ಕಲ್ಯಾಣ ಕರ್ನಾಟಕ ಭಾಗಕ್ಕೂ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದ್ದು, ಇದರಿಂದ ರಾಜ್ಯದಲ್ಲಿನ ವಾಣಿಜ್ಯ ಚಟುವಟಿಕೆಗಳ ಜೊತೆಗೆ ಉತ್ತಮ ಸಂಚಾರ ಸೌಲಭ್ಯವನ್ನೂ ಈ ನೂತನ ವಂದೇ ಭಾರತ್ ರೈಲು ಬಲವರ್ಧಿಸಲಿದೆ ಎಂದಿರುವ ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa