
ನವದೆಹಲಿ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಾತ್ಮ ಜ್ಯೋತಿರಾವ್ ಫುಲೆ ಅವರ 200ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರದ ಪ್ರಮುಖ ನಾಯಕರು ಸಂಸತ್ ಭವನ ಆವರಣದಲ್ಲಿರುವ ಪ್ರೇರಣಾಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಗೌರವ ಅರ್ಪಿಸಿದರು. ಜೊತೆಗೆ ಹರಿವಂಶ್, ಜೆ. ಪಿ. ನಡ್ಡ, ವಿರೇಂದ್ರ ಕುಮಾರ್, ರಾಹುಲ್ ಗಾಂಧಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಲವು ಸಂಸದರು, ಮಾಜಿ ಸಂಸದರು ಮತ್ತು ಅಧಿಕಾರಿಗಳು ಭಾಗವಹಿಸಿದರು.
ಲೋಕಸಭಾ ಸಚಿವಾಲಯದ ಮಾಹಿತಿಯಂತೆ, ಪ್ರೇರಣಾಸ್ಥಳದಲ್ಲಿರುವ ಫುಲೆ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ರಾಷ್ಟ್ರ ನಾಯಕರು ಅವರ ಸೇವೆಯನ್ನು ಸ್ಮರಿಸಿದರು.
19ನೇ ಶತಮಾನದ ಪ್ರಮುಖ ಸಮಾಜ ಸುಧಾರಕರಾದ ಮಹಾತ್ಮ ಫುಲೆ ಅವರು ಸಮಾಜದ ಅಸಮಾನತೆ ನಿವಾರಣೆ, ಶೋಷಿತ ವರ್ಗಗಳ ಉತ್ತೇಜನ ಹಾಗೂ ಮಹಿಳಾ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 1873ರಲ್ಲಿ ಅವರು ಸತ್ಯಶೋಧಕ್ ಸಮಾಜ ಸ್ಥಾಪಿಸಿ ಸಾಮಾಜಿಕ ನ್ಯಾಯದ ಹೋರಾಟಕ್ಕೆ ದಿಕ್ಕು ತೋರಿದರು.
ಕೃಷಿ, ರೈತರ ಕಲ್ಯಾಣ ಮತ್ತು ವೈಜ್ಞಾನಿಕ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದ ಮುಂಚೂಣಿ ಚಿಂತಕರಾಗಿದ್ದ ಫುಲೆ ಅವರು 1876ರಿಂದ 1882ರವರೆಗೆ ಪುಣೆ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದರು. ಸಮಾಜ ಸೇವೆಯಿಗಾಗಿ 1888ರಲ್ಲಿ ಅವರಿಗೆ “ಮಹಾತ್ಮ” ಬಿರುದು ನೀಡಲಾಗಿತ್ತು.
ಸಂಸತ್ ಭವನ ಸಂಕೀರ್ಣದಲ್ಲಿರುವ ಫುಲೆ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ರಾಮ್ ವಿ. ಸುತಾರ್ ನಿರ್ಮಿಸಿದ್ದು, 2003ರ ಡಿಸೆಂಬರ್ 3ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಅನಾವರಣಗೊಳಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa