ಹಿರಿಯ ವಿದ್ವಾಂಸ ಡಾ. ಎಸ್. ಆರ್. ರಾಮಸ್ವಾಮಿ ನಿಧನ ; ಸಾಹಿತ್ಯ-ಪತ್ರಿಕೋದ್ಯಮ ಲೋಕಕ್ಕೆ ಅಪಾರ ನಷ್ಟ
ಬೆಂಗಳೂರು, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹಿರಿಯ ವಿದ್ವಾಂಸ-ಲೇಖಕ, ನಾಡೋಜ, ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ। ಎಸ್. ಆರ್. ರಾಮಸ್ವಾಮಿ (88 ವರ್ಷಗಳು) ಇಂದು ಬೆಳಗ್ಗೆ ಬೆಂಗಳೂರಿನ ಶಂಕರಪುರಂನ ರಂಗರಾವ್ ರಸ್ತೆಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನವು ಕನ್ನಡ ಸಾಹಿತ್ಯ ಮ
Nadoja S. R. Ramaswamy


ಬೆಂಗಳೂರು, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹಿರಿಯ ವಿದ್ವಾಂಸ-ಲೇಖಕ, ನಾಡೋಜ, ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ। ಎಸ್. ಆರ್. ರಾಮಸ್ವಾಮಿ (88 ವರ್ಷಗಳು) ಇಂದು ಬೆಳಗ್ಗೆ ಬೆಂಗಳೂರಿನ ಶಂಕರಪುರಂನ ರಂಗರಾವ್ ರಸ್ತೆಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನವು ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಇಂದು 12.00 ಗಂಟೆಗೆಯ ವರೆಗೆ ಚಾಮರಾಜಪೇಟೆ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವಶಿಲ್ಪದಲ್ಲಿ ಅಂತಿಮದರ್ಶನದ ವ್ಯವಸ್ಥೆ ಮಾಡಲಾಗಿದೆ. 12.00ರ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಐದು ದಶಕಗಳ ಸೇವೆ:

ಐದು ದಶಕಗಳ ಕಾಲ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದ ರಾಮಸ್ವಾಮಿ ಅವರು, ಕಳೆದ 35 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಹಾಗೂ ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 1972ರಿಂದ 1979ರವರೆಗೆ ‘ಸುಧಾ’ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

ಸಾಹಿತ್ಯದ ಮಹತ್ವದ ಕೊಡುಗೆ:

ಸುಭಾಷ್ ಚಂದ್ರ ಬೋಸ್, ಜಯಪ್ರಕಾಶ್ ನಾರಾಯಣ್, ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ಮಹನೀಯರ ಜೀವನಚರಿತ್ರೆಗಳನ್ನು ಒಳಗೊಂಡಂತೆ ಸುಮಾರು 55 ಕೃತಿಗಳನ್ನು ರಚಿಸಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರೋದಯದ ಮೈಲಿಗಲ್ಲುಗಳು’, ‘ಆರ್ಥಿಕತೆಯ ಎರಡು ಧ್ರುವ’, ‘ಶತಮಾನದ ತಿರುವಿನಲ್ಲಿ ಭಾರತ’ ಮುಂತಾದ ಕೃತಿಗಳು ಸಮಾಜವಿಜ್ಞಾನ ಮತ್ತು ಅರ್ಥಶಾಸ್ತ್ರ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದಿವೆ.

ಅವರ ‘ಶತಮಾನದ ತಿರುವಿನಲ್ಲಿ ಭಾರತ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಧರ್ಮಪಾಲ್ ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಭಾರತೀಯ ಚಿಂತನೆಗೆ ಹೊಸ ಆಯಾಮವನ್ನು ತಂದಿದ್ದರು.

ವ್ಯಕ್ತಿಚಿತ್ರ ಹಾಗೂ ಚಿಂತನೆಗಳ ದೀಪ:

‘ದೀವಟಿಗೆಗಳು’, ‘ನಾಗರಿಕತೆಗಳ ಸಂಘರ್ಷ’, ‘ಕೆಲವು ಇತಿಹಾಸ-ಪರ್ವಗಳು’, ‘ದೀಪ್ತಿಮಂತರು’ ಸೇರಿದಂತೆ ಅನೇಕ ಕೃತಿಗಳ ಮೂಲಕ ಸಮಾಜ, ಇತಿಹಾಸ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳನ್ನು ವಿಶ್ಲೇಷಿಸಿದ್ದಾರೆ. 1000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದು, ಸಮಾಜಾಭಿಮುಖ ಚಿಂತನೆಗಳನ್ನು ಜನರಿಗೆ ತಲುಪಿಸಿದ್ದಾರೆ.

ಗೌರವ-ಪ್ರಶಸ್ತಿಗಳು

ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅವರಿಗೆ ‘ಆರ್ಯಭಟ ಪ್ರಶಸ್ತಿ’, ಕರ್ನಾಟಕ ರಾಜ್ಯ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಮಿಥಿಕ್ ಸೊಸೈಟಿ ಶತಮಾನೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. 2015ರಲ್ಲಿ ಹಂಪೆಯ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತ್ತು.

ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಮಾಜ ಚಿಂತನೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಡಾ. ಎಸ್. ಆರ್. ರಾಮಸ್ವಾಮಿ ಅವರ ಅಗಲಿಕೆ, ಕನ್ನಡ ಬೌದ್ಧಿಕ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande